ಆಶಯ

ಒಂದು ಪುಟ್ಟ ವಾಕ್ಯವೋ ಉದ್ಘಾರವೋ ಅಥವಾ ಇನ್ಯಾವುದೋ ಥರಹದ ಕಥೆಯ ಹುಟ್ಟುವಿಕೆಗೆ ಕಾರಣವಾಗಬಲ್ಲ ಕುಡಿಯನ್ನಿಟ್ಟುಕೊಂಡು ಅದರ ಸುತ್ತ ಓದುಗರ ಕಲ್ಪನೆಗೆ ಬಂದಂತೆ ಕಥೆಕಟ್ಟುವುದು "ಕುಡಿಗತೆಗಳು" ಗುಂಪಿನ ಮೂಲ ಉದ್ದೇಶ . ಹೀಗೆ ಒಂದೇ ಮೂಲದಿಂದ ಹೊರಟ ಹಲವಾರು ಕಥೆಗಳು ವಿವಿಧ ಆಯಾಮ ಪಡೆದುಕೊಳ್ಳುತ್ತಾ ಒಟ್ಟಾರೆಯಾಗಿ ನೋಡಿದಾಗ ಒಂದು ಕಥನಗುಚ್ಛವೇ ನಮ್ಮೆದುರು ತೆರೆದುಕೊಳ್ಳುತ್ತದೆ.ಇಂತಹ ಕಥೆಗಳನ್ನು ಓದಿ ಸಂಭ್ರಮಿಸಲಿರುವ ಪುಟ್ಟ ವೇದಿಕೆ ಇದು .ಆಫೀಸು-ಮನೆ ಸೇರಿದಂತೆ ನಿತ್ಯಜೀವನ ಜಂಜಾಟದಲ್ಲಿ ತೊಡಗಿರುವಾಗ ಆ ಏಕತಾನತೆಯಿಂದ ಹೊರಬಂದು ಒಂದು ಪುಟ್ಟ ಕಥೆ ಕಟ್ಟುವ ಮೂಲಕ ನಮ್ಮೊಳಗಿನ ಸೃಜನಶೀಲತೆಯನ್ನು ಪೋಷಿಸಿ ಮನಸ್ಸು ಬೆಚ್ಚಗಾಗಿಸಿಕೊಂಡರೆ ಈ ಪ್ರಯತ್ನ ಸಾರ್ಥಕ. smile emoticon .

ಬ್ಲಾಗ್ ಆರ್ಕೈವ್

ಮಂಗಳವಾರ, ಫೆಬ್ರವರಿ 3, 2015

ಪ್ರಯತ್ನ-೭


ಕುಡಿ:"ಹೊರಗೆ ಗವ್ವೆನ್ನುವ ನಡುರಾತ್ರಿ...ಅತ್ತ ನಾಯಿ ಊಳಿಡುತ್ತಿದ್ದರೆ
ಇತ್ತ ಇವರೆಲ್ಲ ಮೆತ್ತಗೆ ಮರೆಯಾದರು"
(ಕುಡಿಕೃಪೆ:ಸುಗುಣಾ ಮಹೇಶ್)

ಆಗ ಸಮಯ ರಾತ್ರಿ ಸುಮಾರು ಒಂಬತ್ತು ಮುಕ್ಕಾಲು ಇರಬಹುದು.. ಹೈ ಹೀಲ್ಡ್ ಶೂ, ಟೈಟ್ ಜೀನ್ಸ್, ಟೀ ಶರ್ಟು, ಕಣ್ಣಿಗೆ ಬ್ಲೂ ಲೆನ್ಸು , ಕರ್ಲಿ ಕೂದಲು, ತುಟಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಒಂದು ಕೈಯಲ್ಲಿ ಬ್ಯಾಗು, ಇನ್ನೊಂದು ಕೈಯಲ್ಲಿ ಮೊಬೈಲ್ ಫೋನ್ ಹಿಡಿದ ಒಂದು ಸುಂದರ ಹುಡುಗಿ ಬಸ್ ಸ್ಟಾಪ್ ನಲ್ಲಿ ಬಸ್ಸಿಗೆ ಕಾಯ್ತಾ ಇದ್ದಳು...!! ಬಸ್ ಸ್ಟಾಪಿನಲ್ಲಿ ಹರಟುತ್ತ ಕುಳಿತಿದ್ದ ಹುಡುಗರು ಅವಳನ್ನೇ ಗಮನಿಸುತ್ತಿದ್ದರು..!! ಇದನ್ನು ಕಂಡು ಅವಳು ಮತ್ತಷ್ಟು ದಿಗಿಲುಗೊಂದಳು..!! ನಾನೊಬ್ಬಳು ಫೆಮಿನಿಸ್ಟ್, ಯಾವುದಕ್ಕೂ ಹೆದರೋಲ್ಲಾ, ಏನೇ ಕಷ್ಟ ಬಂದರೂ ಎದುರಿಸುತ್ತೀನಿ, ನಾವು ಯಾವುದಕ್ಕೂ ಕಮ್ಮಿ ಇಲ್ಲಾ ಈ ಪುರುಷ ಪ್ರದಾನ ಸಮಾಜದಲ್ಲಿ, ಹಾಗೇ ಹೀಗೇ ಎಂದು ಉದ್ದುದ್ದ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಆ ಹೆಣ್ಣು ಆ ನಿರ್ಜನ ರಾತ್ರಿಯಲ್ಲಿ ಚಳಿಯಲ್ಲಿಯೂ ಬೆವರ ತೊಡಗಿದ್ದಳು.. " ರಾತ್ರಿ ಇಲ್ಲೇ ಇದ್ದು ಬೆಳಿಗ್ಗೆ ಮನೆಗೆ ಹೋಗು, ಇರೋದು ಒಂದು ಬಸ್ಸು, ಆಟೋಗಳು ಕೂಡ ಸಿಗೋಲ್ಲ.." ಎಂದ ಹಿತೈಷಿಗಳ ಮಾತನ್ನೂ ಕಡೆಗಣಿಸಿ ",, "ಕೇವಲ ಹತ್ತು ಕಿಲೋಮೀಟರು ಅಷ್ಟೇ ತಾನೇ ನಾನೇನು ಭಯಪಡಲು ಹಿಂದಿನ ಕಾಲದ ಹುಡುಗಿಯೇ?" ಎಂದು ಹಟದಿಂದ ಉತ್ತರಿಸಿ ಬಂದು, ರಾತ್ರಿ ಹತ್ತು ಗಂಟೆಯ ಬಸ್ಸನ್ನು ಕಾಯುತ್ತ ನಿಂತಿದ್ದ ಅವಳಿಗೆ ಈಗಿನ ಒಂದೊಂದು ಕ್ಷಣವೂ ಒಂದೊಂದು ಯುಗಗಳಂತೆ ಭಾಸವಾಗತೊಡಗಿತು..!! "ಮಹಿಳೆ ಪುರುಷರಿಬ್ಬರೂ ಸಮಾನರು, ಪುರುಷರಿಗಿಂತಾ ನಾವೇ ಎಲ್ಲಾ ವಿಷಯದಲ್ಲೂ ಮೇಲು, ಅವರಿಗೆ ನಾವು ಹೆದರುವ ಅವಶ್ಯಕತೆ ಏನು?? ನಮಗೂ ಅವರಿಗಿಂತ ಜಾಸ್ತಿ ದೃಡತೆ ಶಕ್ತಿ ಎಲ್ಲಾ ಇದೆ, ಆದರೂ ಈ ಹೆಣ್ಮಕ್ಕಳು ಯಾಕೇ ಹೆದರಿ ಸಾಯ್ತಾರೋ" ಅಂತ ಸಹಚರರ ಎದುರಿಗೆ ವಾದಿಸುತ್ತಿದ್ದ ಅವಳ ವಿಶ್ವಾಸ, ಆಕ್ರೋಶ ಯಾವುದೂ ಆ ಸಮಯಕ್ಕೆ ಅವಳ ಸಾಂತ್ವನಕ್ಕೆ ಬರಲೇ ಇಲ್ಲ..!! ಮನಸ್ಸಿನಲ್ಲಿ ಬರಿಯ ನಕಾರಾತ್ಮಕ ಯೋಚನೆಗಳೇ ಬರ ತೊಡಗಿದವು.. ಪೇಪರ್ ಅಲ್ಲಿ ಓದಿದ್ದು, ಟಿವಿ ಯಲ್ಲಿ ನೋಡಿದ್ದು, ಅತ್ಯಾಚಾರ ಕೊಲೆ ಇವೆ ಅವಳ ತಲೆಯೊಳಗೆ ಸುಳಿದಾಡಿ ಅವಳನ್ನು ಇನ್ನಷ್ಟು ಜರ್ಜರಿತಗೊಳಿಸಿತ್ತು..!! ಆ ಹುಡುಗರು ಕುಳಿತಲ್ಲಿಂದ ಎದ್ದು ಇವಳ ಹತ್ತಿರವೇ ಬರತೊಡಗಿದರು.. ಅವಳ ಕೈ ಕಾಲುಗಳು ಒಂದೇ ಸಮನೆ ನಡುಗತೊಡಗಿತು.. ಅವಳ ಧೈರ್ಯ ಸಿಟ್ಟು ಅಕ್ರೋಶ ಎಲ್ಲವೂ ಆ ಸಮಯದಲ್ಲಿ ಯಾವ ದೇಶದ ಗಡಿ ದಾಟಿತ್ತೋ ಆ ದೇವರಿಗೆ ಗೊತ್ತು.. ಇನ್ನಸ್ಟು ಹತ್ತಿರ ಬಂದ ಹುಡುಗರಲ್ಲಿ ಒಬ್ಬನು ಅವಳನ್ನು ನೋಡಿ, ಅವಳ ಮುಕದ ಹತ್ತಿರ ಕೈ ಹಿಡಿದು... . . . . . . . . . . . . . . . " ಸಿಸ್ಟರ್ ಬಸ್ಸು ಬಂತು ಹತ್ತಿ... ಇದು ಕೊನೆ ಬಸ್ಸು, ಯಾವ್ದೋ ಚಿಂತೇಲಿ ಇರೋ ಹಾಗಿದೆ, ಬಸ್ಸು ಮಿಸ್ಸು ಮಾಡ್ಕೋಬೇಡಿ ಬನ್ನಿ ಹತ್ತಿ" ಎಂದಾಗಲೇ ಅವಳು ವಾಸ್ತವಿಕತೆಗೆ ಮರಳಿದಳು.. ಅವಳಿಗೆ ಗೊತ್ತಾಗದ ಹಾಗೇ ಆ ಹುಡುಗನ ಕೈ ಹಿಡಿದುಕೊಂಡು ಬಸ್ಸನ್ನ್ನೇರಿದಳು..!! "ಹೊರಗೆ ಗವ್ವೆನ್ನುವ ನಡುರಾತ್ರಿ...ಅತ್ತ ನಾಯಿ ಊಳಿಡುತ್ತಿದ್ದರೆ ಇತ್ತ ಇವರನೆಲ್ಲ ಹೊತ್ತ ಬಸ್ಸು ಮೆತ್ತಗೆ ಮರೆಯಾಯ್ತು." ಇದನ್ನೆಲ್ಲಾ ಕಾಲ ಅನ್ನೋ ನಿರ್ಲಿಪ್ತ ಜಗತ್ತು ಮೌನವಾಗಿ ನೋಡುತ್ತಿತ್ತು,,!
#ಎಂ.ಆರ್. ಸಚಿನ್
ಒಟ್ಟಿಗೆ ಕುಳಿತು ಮ್ಯಾಗಿ ತಿಂತಾ ಯಾವುದೋ ಪೋಲಿ ಪಿಚ್ಚರ್ ನೋಡ್ತಾ ಕುಳಿತಿದ್ದರು. ನಂತರ ಸರದಿಯಂತೆ ಐದೂ ಜನ ಬಚ್ಚಲುಮನೆ ಕಡೆ ನಡೆದರು. ಎಲ್ಲರಲ್ಲೂ ಏನೋ ತರದ ಉದ್ವೇಗ. ಗಂಟೆ ಮಧ್ಯರಾತ್ರಿ ಒಂದು ಬಡಿದಿತ್ತು. ಸರಸರನೆ ಎಲ್ಲ ಅವರವರ ರೂಮು ಸೇರಿಕೊಂಡರು. ಸಿಕ್ಕಿದ ಜೀನ್ಸ್ ಟೀಶರ್ಟ್ ಏರಿಸಿಕೊಂಡು ಕತ್ತಿಗೆ ಟ್ಯಾಗ್ ಸಿಗಿಸಿಕೊಂಡು ಹೊರಗೆ ಗವ್ವೆನ್ನುವ ನಡುರಾತ್ರಿಯಲ್ಲಿ ಕ್ಯಾಬ್ ಹತ್ತಿ ಹೊರಟರು ಯು ಎಸ್ ಶಿಫ್ಟಿನ ಕಾಲ್ ಸೆಂಟರಿಗೆ, ಒಂದೇ ಪೀಜಿಯ ಐವರು ಯುವಕರು. ಅತ್ತ ನಾಯಿ ಗೂಳಿಡುತ್ತಿದ್ದರೆ ಇತ್ತ ಇವರು ನಾಯಿಯಂತೆ ದುಡಿಸಿಕೊಳ್ಳುವ ಕಾರ್ಪೊರೇಟ್ ಜಗತ್ತು ಸೇರಿ ಲೌಕಿಕದಿಂದ ಮರೆಯಾದರು.
#ಶಶಾಂಕ ಸೋಗಾಲ
ಒಂದೇ ಜನನಿಯ ಗರ್ಭದಿಂದ ಜನನವಾಗದಿದ್ದರೂ, ಒಂದೇ ಕೇರಿಯಲ್ಲಿ ಒಂದೇ ದಿನ, ಒಂದೇ ಘಳಿಗೆಯಲ್ಲಿ ಹುಟ್ಟಿದ್ದೆವು, ಒಂದೇ ಡೇರಿಯ ಹಾಲು ಕುಡಿದಿದ್ದೆವು, ಒಂದೇ ಷೊರೂಮಿನ ಅಂಗಿಗಳನ್ನು ತುಟ್ಟಿದ್ದೆವು, ಒಂದೇ ಬಾಲವಡಿ (ಕಿಂಡರಗಾರ್ಟನ್) ಗೆ ಸೇರಿ ಒಂದೇ ಕಟ್ಟಿಗೆಯ ಕುದುರೆಯ ಮೇಲೆ ಆಟವಾಡಿದ್ದೆವು. ಒಂದೇ ಕೋಲಿನಿಂದ ಚಿನ್ನಿ, ದಾಂಡು ಆದಿದ್ದೆವು, ಹೀಗೆ ಸರಾಗವಾಗಿ, ರಾಗವಾಗಿ ಸವೆಯುತ್ತಿದ್ದ ಜಿವನದಲ್ಲಿ, ಒಂದೇ ಮೋಟಾರಿನ ಮೇಲೆ ಸವಾರಿ ಹೊರ್ಟಾಗ,ಒಮ್ಮೇಗೆ ಅಕಸ್ಮಾತಾಗಿ ಒಂದು ಮರಕ್ಕೆ ನಮ್ಮ ಮೋಟಾರು ಬೈಕು ಡಿಕ್ಕಿ ಹೊಡೆದಾಗ .... ನನ್ನ ಸ್ನೇಹಿತನ ಪ್ರಾಣಪಕ್ಷಿ ಮಾತ್ರ ಪರಮಾತ್ಮನ ಚರಣ ಕಮಲ ಸ್ಪರ್ಷ ಮಾಡಿತ್ತು, ನನ್ನ ಪ್ರಾಣಪಕ್ಷಿ ಇನ್ನೂ ಪಾಪಿಗಳ ಲೋಕದಲ್ಲಿ, ಆ ನನ್ನ ಸ್ನೇಹಿತನ ಆನಂದಾತ್ಮಕ್ಕೆ ಶಾಂತಿಯನ್ನು ಕೋರಿ ನನ್ನ ಸೂರಿನ ಕಡೆಗೆ ಮೆಲ್ಲನೆ ಹೆಜ್ಜೆ ಇಟ್ಟಾಗ, ಹೊರಗೆ ಗವ್ವೆನ್ನುವ ನಡುರಾತ್ರಿ...ಅತ್ತ ನಾಯಿ ಊಳಿಡುತ್ತಿದ್ದರೆ ಇತ್ತ ಇವರೆಲ್ಲ ಮೆತ್ತಗೆ ಮರೆಯಾದರು...
#ಓಂ ಆನ್ ಆರ್ಟಿಸ್ಟ್
ಅವನದು ಕುಲ ಕಸಬು ಬುಡುಬುಡುಕೆ ಹೇಳೊದು. ಬಿಡಬಾರದೆಂದು ಅದನ್ನೆ ಮಾಡುತ್ತಿದ್ದನು. ಬೆಂಗಳೂರೆಂಬ ನಗರದಲ್ಲಿ ಬುಡುಬುಡುಕೆಯವನ ಮಾತು ಕೇಳೊರು ಕಡಿಮೆ. ಹಳ್ಳಿಗಳಲ್ಲಿ ಅವನಿಗೆ ಕಡಿಮೆ ಗಿಟ್ಟುತ್ತಿದ್ದರೂ ಊರೂರು ಸುತ್ತುತ್ತ ಸಣ್ಣ ಪಟ್ಟಣ ಹಳ್ಳಿಗಳಲ್ಲಿ ಕೆಲ ದಿನಗಳು ವಾಸಿಸುತ್ತಿದ್ದನು. ಮನೆ ಮಠ ಎನೂ ಇರಲಿಲ್ಲ. ಈ ಊರಲ್ಲಿ ಬಹಳ ದಿನ ಉಳಿದನು. ದಿನವಿಡಿ ಬುಡುಬುಡುಕೆ ಹೇಳಿ ಸಂಜೆ ಊರಾಚೆ ಸಿದ್ದೇಸನ ಗುಡಿ ಅಥವಾ ಜಗಲಿ ಕಟ್ಟೆ ಮೇಲೆ ಮಲಗುತ್ತಿದ್ದನು. ಅವನ ಜೊತೆಗೆ ಅವನ ನಾಯಿ ರಾಮಮಾತ್ರ ದಿನ ಮಲಗುತಿತ್ತು. ಎಂದಿನಂತೆ ದಿನವೆಲ್ಲಾ "ನಿಮಗೆಲ್ಲಾ ಶುಭವಾಗುತ್ತೆ" ಅಂತ ಬುಡುಬುಡುಕೆ ಶಾಸ್ತ್ರ ಹೇಳಿ ರಾತ್ರಿ ರಾಮನ ಜೊತೆ ಊಟ ಮಲಗಿದ್ದನು. ರಾತ್ರಿ ಸುಮಾರು ಹನ್ನೊಂದು ವರೆ ಸಮಯ. ಅವನ ಬಾಯಲ್ಲಿ ಜೊಲ್ಲು ಸುರಿಯುತಿತ್ತು. ಉಸಿರು ನಿಂತು ಹೋಗಿತ್ತು. ಬೇಲಿಯಿಂದ ಬಂದಿದ್ದ ಕರಿನಾಗ ಕಡಿದು ಹೋಗಿತ್ತು. ನಾಯಿ ರಾಮ ಇದನ್ನು ಕಂಡು ಬೊಗಳುತ್ತಿದ್ದ. ಊರೆಲ್ಲಾ ಮಲಗಿತ್ತು. ಹತ್ತಿರವಿದ್ದ ಒಂದಿಬ್ಬರು ಬಂದು ನೋಡಿದರು. ಹೊರಗೆ ಗವ್ವೆನ್ನುವ ನಡುರಾತ್ರಿ...ಅತ್ತ ನಾಯಿ ಊಳಿಡುತ್ತಿದ್ದರೆ ಇತ್ತ ಇವರೆಲ್ಲ ಮೆತ್ತಗೆ ಮರೆಯಾದರು..
#ಮಹೇಶ್ ಸಿದ್ದಲಿಂಗಪ್ಪ
ಮಹಾದಾನಿ ಎಷ್ಟೋ ಜನರ ಹೊತ್ತಿನ ಕೂಳಿಗೆ ಹೊಣೆಯಾಗಿದ್ದ. ಬಂಧು, ಬಳಗ, ಮಕ್ಕಳೆಲ್ಲರಿಗೂ ತುಂಬಾ ಬೇಕಾಗಿದ್ದ... ಒಂದು ದಿನ ಸತ್ತ... ನಾರುತ್ತಾನೆಂದು ಸಂಜೆಗೇ ಒಪ್ಪ ಮಾಡಿದರು... ಹಾಡಿ ಹೊಗಳಿದರು, ಗುಣಗಾನ ಮಾಡಿದರು ಅಳುವವರೆಲ್ಲಾ ಅತ್ತು ಕರೆದು ಗೋಳಿಟ್ಟರು... ಹೊತ್ತು ಉರುಳಿತು, ತಣಿಸಿದ್ದ ದಣಿಯ ಹೊಗಳಿ ದನಿಗೂ ದಣಿವಾಯ್ತು... ಹೊರಗೆ ಗವ್ವೆನ್ನುವ ನಡುರಾತ್ರಿ... ಅತ್ತ ನಾಯಿ ಊಳಿಡುತ್ತಿದ್ದರೆ ಇತ್ತ ಇವರೆಲ್ಲ ಮೆತ್ತಗೆ ಮರೆಯಾದರು... ನಾಳಿನ ತುತ್ತಿಗೆ ತವಡು ಕುಟ್ಟಲು! Show must go on! No one is indispensable in this world!
#ಸುರೇಶ ಶೆಟ್ಟಿ
ಆತ ತುಂಬ ಹುರುಪಿನವ. ಮದುವೆಯಾದ ಒಂದಾರು ತಿಂಗಳು ಗಂಡ ಹೆಂಡತಿ ಇಬ್ಬರೂ ಸಂತೋಷವಾಗಿದ್ದುದರನ್ನು ಜನರು ಕಂಡರೆ ವಿನಃ ನಂತರ ಅವರಲ್ಲಿ ಮೊದಲಿದ್ದ ಹುರುಪು, ಪ್ರೀತಿ, ಒಲವು ಇದ್ದಕ್ಕಿದ್ದಹಾಗೆ ಶೂನ್ಯವಾಗಿಬಿಟ್ಟಿತ್ತು. ಅವರಿಬ್ಬರೂ ಜನರೊಡನೆ ಮಾತನಾಡುವುದನ್ನು ಕಡಿಮೆ ಮಾಡಿಬಿಟ್ಟರು. ತಾವಾಯಿತು, ತಮ್ಮ ಟೈಲರಿಂಗ್ ಕೆಲಸವಾಯಿತು. ಗ್ರಾಹಕರೊಂದಿಗೆ ಎಷ್ಟು ಬೇಕೇ ಅಷ್ಟು ಮಾತನಾಡುತ್ತಿದ್ದರೆ ವಿನಃ ಒಂದು ಪದ ಹೆಚ್ಚಿಗೆ ಮಾತನಾಡಿದರೆ ಎಲ್ಲಿ ಮುತ್ತು ಉದುರುತ್ತದೋ ಎಂದು ಭಯಪಡುತ್ತಿರುವುದನ್ನು ಬಂದವರೆಲ್ಲಾ ಗಮನಿಸಿದ್ದರು. ಮೊದ ಮೊದಲು ಅವರುಗಳ ಬಗ್ಗೆ ಜನರಿಗೆ ಕುತೂಹಲವಾಯಿತು. ನಂತರ ಅವರ ಸ್ವಭಾವಕ್ಕೆ ಎಲ್ಲರೂ ಒಗ್ಗಿಕೊಂಡರು. ಹೊಸದಾಗಿ ಊರಿಗೆ ಯಾರೇ ಬಂದರೂ ಇವರ ಬಗ್ಗೆ ಆಶ್ಚರ್ಯ ಪಡುತ್ತಿದ್ದುದಂತೂ ನಿಜ. ಒಂದು ದಿನ ಹೀಗೇ ಸಾಗುತ್ತಿರುವಾಗ ಇನ್ನೂ ಇಪ್ಪತ್ತಾರು ವರ್ಷದ ಗಂಡ ಸತ್ತು ಹೋದ. ಆದರೆ, ಅವಳು ಅಳಲಿಲ್ಲ. ಇದು ಸಾಮಾನ್ಯವೆಂಬಂತೆ ಕುಂತುಬಿಟ್ಟಿದ್ದಳು. ಸಂಬಂಧಿಕರುಗಳು ಕೂಡಾ ಅಂತ್ಯಸಂಸ್ಕಾರ ಮಾಡಿ ತಮಗೇನೂ ಸಂಬಂಧವಿಲ್ಲವೆಂಬಂತೆ ತರಾ ತುರಿಯಲ್ಲಿ ಹೊರಟು ಹೋದರು. ಇವಳು ಒಂದು ರೂಮಿನಂತಹ ಚಿಕ್ಕ ಮನೆಯಲ್ಲಿ ಒಂಟಿಯಾಗಿಬಿಟ್ಟಳು. ಇವಳೇ ಅವನನ್ನು ಕೊಂದಳೆಂದು ಊರಿನ ಜನರು ತರಹೇವಾರಿ ಮಾತನಾಡಿಕೊಂಡರು. ಒಂದು ದಿನ ನಡುರಾತ್ರಿಯಲ್ಲಿ ಅವಳೊಬ್ಬಳೇ ಊರಿನ ಹೊರಗೆ ನಡೆದುಕೊಂಡು ಹೋಗುತ್ತಿರುವುದನ್ನು ಒಂದಿಬ್ಬರು ನೋಡಿ, ಊರಿನ ಜನರಿಗೆ ಸುದ್ದಿ ಮುಟ್ಟಿಸಿದರು. ಎಲ್ಲರಿಗೂ ಕುತೂಹಲ ವ್ಯಾಧಿಯಂತೆ ಉಲ್ಬಣಿಸಿ, ಒಂದಿಬ್ಬರಿಂದ ನೂರಾರು ಜನರು ಊರ ಹೊರಗೆ ಅವಳನ್ನರುಸುತ್ತಾ ಹೆಜ್ಜೆ ಹಾಕಿದರು. ಅವಳು ಊರ ಹೊರಗಿನ ಸ್ಮಶಾನದಲ್ಲಿ ಗಂಡನ ಸಮಾಧಿಯ ಮೇಲೆ ಬಿದ್ದುಕೊಂಡು ಹೊರಳಾಡುತ್ತಾ, ನೀನು ಮಾಡಿದ ತಪ್ಪಿಗೆ ನೀನು ಶಿಕ್ಷೆ ಅನುಭವಿಸಿದೆ. ನನಗೂ ಶಿಕ್ಷೆಯನ್ನು ಕೊಟ್ಟುಬಿಟ್ಟೆಯಲ್ಲಾ ಎನ್ನುತ್ತಿದ್ದಳು. ಜನರ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಎದ್ದುವು. ಅವಳು ಅಳುತ್ತಾ, ನೀನಂತೂ ಸೋಲೊಪ್ಪಿಕೊಂಡೆ, ನಾನು ನನ್ನ ಜೀವನದ ಕೊನೆಯವರೆಗೂ ಈ ಏಡ್ಸ್ ಮಹಾಮಾರಿ ವಿರುದ್ಧ ಹೋರಾಡಿ ಬದುಕುತ್ತೇನೆ. ನನ್ನ ದೇಶದ ವಿಜ್ಞಾನಿಯೊಬ್ಬ ಇದಕ್ಕೆ ಮದ್ದು ಕಂಡುಹಿಡಿದೇ ಹಿಡಿಯುತ್ತಾನೆ ಎಂದು ವಿಶ್ವಾಸದಿಂದ ಎದ್ದು ನಿಂತಳು. ಹೊರಗೆ ಗವ್ವೆನ್ನುವ ನಡುರಾತ್ರಿ...ಅತ್ತ ನಾಯಿ ಊಳಿಡುತ್ತಿದ್ದರೆ ಇತ್ತ ಇವರೆಲ್ಲ ಮೆತ್ತಗೆ ಮರೆಯಾದರು.
#ಶಿವಶಂಕರ ವಿಷ್ಣು ಯಳವತ್ತಿ
ಆ ಬಂಗಲೆಯ ಜನರೆಲ್ಲಾ ಬೃಂದಾವನಕ್ಕೆ ಹೋಗಿದ್ದಾರೆ, ತುಂಟ ಕೃಷ್ಣನ ದರುಶನಕ್ಕೆ. ಈಗ ಸಾಕು ನಾಯಿ "ರಾಜ"ನದೇ ದರ್ಬಾರು ಅವನೇ ಸರದಾರ. ರಾಜನ ಊಟ ತಿಂಡಿ ಪಕ್ಕದ ಮನೆಯಿಂದಲೇ ಬರುತ್ತಿದೆ, ತಿಂದುಂಡು ಅಡ್ಡಾಡುತ್ತಿದ್ದಾನೆ. ಪಕ್ಕದ ಮನೆಯವರು ಇಂದೇನೋ ಭಾನುವಾರದ ಬಾಡೂಟ ತಂದು ಬಡಿಸಿದ್ದಾರೆ. ಮೃಷ್ಟಾನ ಭೋಜನ ಇವತ್ತು ಈ ರಾಜನಿಗೆ. ಹೊಟ್ಟೆ ಬಿರಿಯಾ ತಿಂದು ರಾತ್ರಿ ೮ ಕ್ಕೆ ತನ್ನ ಕೋಣೆಯಲಿ ತಣ್ಣನೆ ಮಲಗಿದ್ದಾನೆ. ಅದಾಗಲೇ ಸರಿ ರಾತ್ರಿ ಹೊರಗೆಲ್ಲಾ ಗವ್ವೆನ್ನುತಿದೆ ಸುತ್ತಲೂ ನಿಶ್ಯಬ್ದದ ಕಡುಗತ್ತಲು, ಬೀದಿ ದೀಪಗಳೂ ಉರಿಯುತ್ತಿಲ್ಲ. ರಾಜ ಕಣ್ಣು ಬಿಟ್ಟು ನೋಡುತ್ತಾನೆ, ತನ್ನ ಕುತ್ತಿಗೆಗೆ ಯಾರೋ ಪಟ್ಟಿ ಜಡಿದು ಕಟ್ಟಿ ಹಾಕಿದ್ದಾರೆ. ತಟ್ಟನೆ ಎದ್ದ ರಾಜ ಗಾಬರಿಯಲಿ, ಸುತ್ತ ಕಣ್ಣಾಡಿಸುತ್ತಾನೆ ಅಲ್ಯಾರೋ ಬೆನ್ನಮೇಲೆ ಮೂಟೆಗಳನ್ನು ಹೊತ್ತು ನಾಲ್ಕೈದು ಜನ ಹೋಗುತ್ತಿದ್ದಾರೆ. ಕುತ್ತಿಗೆಯಲ್ಲಿನ ದಾರ ಬಿಚ್ಚಿ, ಓಡಿ ಅವರ ಕೈಕಾಲು ಬಗೆಯಬೇಕೆಂದು ಕೋಪದಲಿ ಎಳೆದಾಡಿದರೂ ಬಿಡಿಸಿಕೊಳ್ಳಲಾಗದ ಆ ಗಂಡು ಭದ್ರವಾಗಿದೆ. ವಿಧಿಯಿಲ್ಲ ಅರಚುತ್ತಿದ್ದಾನೇ, ಯಾರೋ ಕಾಣದವರು ಮನೆ ಸುತ್ತುವರಿದಿದ್ದಾರೆ ಏನು ಮಾಡುವುದೆಂದು ತಿಳಿಯದೇ ಊಳಿಡುತ್ತಿದ್ದಾನೆ. ಅಕ್ಕಪಕ್ಕದ ಮನೆಯವರು ಗಾಢ ನಿದ್ರೆಯಲಿ ಕನಸು ಕಾಣುತ್ತಿದ್ದಾರೆ. ಇತ್ತ ಬಂದವರೆಲ್ಲ ಮೆಲ್ಲಗೆ ಮರೆಯಾದರು. ರಾಜ ಮಾತ್ರ ಬಾಡೂಟ ಕೊಟ್ಟವನನ್ನೇ ಅನುಮಾನಿಸುತ್ತ ಹಲ್ಲು ಮಸೆಯುತ್ತಿದ್ದಾನೆ
#ಸುಗುಣಾ ಮಹೇಶ್
ಅಂದು ನನ್ನ ಜೀವನದ ಅತ್ಯಂತ ಸಂತೋಷದ ದಿನ.ಕ್ಯಾನ್ಸರ್ ಎಂಬ ಮಹಾಮಾರಿಗೆ ಔಷಧಿ ಕಂಡುಹಿಡಿಯ ಬೇಕೆಂಬ ಆಸೆ ಅಂದು ಈಡೇರಿತ್ತು.ಐದು ವರ್ಷದ ಸಂಶೋಧನೆ ಫಲ ಕೊಟ್ಟಿತ್ತು. ಆನಂದದಲ್ಲಿ ತೇಲಾಡುತ್ತಿದ್ದ ನನ್ನನ್ನು ಗಡಿಯಾರ ತನ್ನ ಶಬ್ದದಿಂದ 11 ಘಂಟೆ ಆಯ್ತೆಂದು ಎಚ್ಚರಿಸಿತ್ತು. ನಡುರಾತ್ರಿ ಮನೆ ಸೇರುವುದು ನನಗೆ ಹೋಸದೇನು ಅಲ್ಲ. ಆದರೂ ಇಂದು ಅಮ್ಮನಿಗೆ ನನ್ನ ಸಾಧನೆ ಹೇಳುವ ತವಕ. ಕೂಗಳತೆ ದೂರದಲ್ಲಿರುವ ಮನೆಯೂ ಕಿಲೋಮಿಟರ್ ದೂರದಲ್ಲಿರುವಂತೆ ಭಾಸವಾಗುತ್ತಿತ್ತು. ಸರ ಸರನೆ ಹೆಜ್ಜೆ ಹಾಕುತ್ತಿದ್ದ ನನ್ನ ಐದಾರು ಕೈಗಳು ಸರಕ್ಕನೆ ಎಳೆದುಕೊಂಡದ್ದಷ್ಟೇ ನೆನಪು. ಕಣ್ಣು ಬಿಟ್ಟಾಗ ನಡುರಾತ್ರಿಯ ಗವ್ವೆನ್ನುವ ಕತ್ತಲಲ್ಲಿ ನಾಯಿಗಳು ಊಳಿಡುತ್ತಿದ್ದರೆ ನನ್ನ ದೇಹವನ್ನು ಮುಕ್ಕಿದ ಇವರುಗಳು ಮೆತ್ತಗೆ ಮರೆಯಾದರು.
#ಅನುಶಾ ಎಂ ಹೆಗಡೆ
ಊರಿನಲ್ಲಿ ಚೌಡಿಕಾಟ ಎಂಬ ಸುದ್ದಿ ಬಹಳ ದಿನದಿಂದ ಹಬ್ಬಿತ್ತು. ಅದೇ ಕಾರಣದಿಂದ ಅಲ್ಲಿ ಖಾಲಿ ಬಿದ್ದಿದ್ದ ಅಡಿಕೆತೋಟವನ್ನು ಖರೀದಿಸಲು ಯಾರೂ ಮುಂದೆಬರುತ್ತಿರಲಿಲ್ಲ...ಒಮ್ಮೊಮ್ಮೆ ಯಾರಾದರು ಖರೀದಿಗೆ ಬಂದು ಹೋಟೇಲಿಗೆಲ್ಲ ಗತಿಯಿರದ ಊರಲ್ಲೇ ಯಾರದಾದರೂ ಮನೆಯಲ್ಲಿ ರಾತ್ರಿ ಉಳಿದುಕೊಂಡರೆ ಆ ಮನೆಗೆ ಚೌಡಿ ಕಲ್ಲೆಸೆಯುವುದು ಸಾಮಾನ್ಯವಾಗಿತ್ತು...ಇದನ್ನು ಮನಗಂಡ ಕಾಲೇಜು ಪೋರನೊಬ್ಬನು ಪೂರ್ಣಿಮೆಯ ದಿನ ಇಂತದೇ ಗಿರಾಕಿಯ ಉಳಿಯುವಿಕೆಯ ಸೂಟು ಸಿಕ್ಕಿ ಅವನು ಆಶ್ರಯಿಸಿದ ಮನೆಯ ಹತ್ತಿರದ ದಿಬ್ಬದಲ್ಲಿ ಅಡಗಿಕೂತನು...ಸುಮಾರು ಹನ್ನೆರಡು ಗಂಟೆ...ಊರಿನ ಪ್ರಮುಖರ ಮಗನೇ ಇನ್ನೆರಡು ಹುಡುಗರನ್ನು ಕಟ್ಟಿಕೊಂಡು ಚಿಟಿಬಿಲ್ಲಿನಿಂದ ಕಲ್ಲೆಸೆಯುತ್ತಿದ್ದಾನೆ!!! ...."ಏಯ್ ಯಾರ್ರ್ ಅದು" ಎಂದು ಹೇಳಲು ಅವರೆಲ್ಲ ಮೆತ್ತಗೆ ಮರೆಯಾದರು...ಕೆಳಮನೆಯ ಕೇರಿಯಲ್ಲೇಲೋ ನಾಯಿ ಹೀಟು ಹೆಚ್ಚಾಗಿ ಊಳಿಡುತ್ತಿತ್ತು...
#ಚಿನ್ಮಯ ಭಟ್ಟ
ಆಗ ನಾನು ಚಿಕ್ಕೋನಿದ್ದೆ. ಚಿಕ್ಕೋನು ಅಂದ್ರೆ ತುಂಬಾ ಚಿಕ್ಕೋನಲ್ಲ, ಅಪ್ಪ ಚಾಕಲೇಟ್ ತಂದ್ರೆ ಚಿಕ್ಕೋನು, ಓರಿಗೆಯೋರ ಜೊತೆ ಟೂರ್ನಮೆಂಟ್ ತಿರುಗೋವಾಗ ದೊಡ್ಡೋನು. ಹಿಂಗೇ ತಿರುಗಾಟ ಜೋರಾಗಿ ಜೊತೆಗಾರರು ಜಾಸ್ತಿಯಾಗಿದ್ರು. ಎಲ್ರೂ ಒಳ್ಳೆಯೋರೇ ಸಿಗ್ತಾರ್ಯೆ? ನಂಗೂ ಒಂದಿಬ್ರು ಒಂಥರಾ ಪ್ರೆಂಡ್ಸಿದ್ರು ಬಿಡಿ. ಜಾಸ್ತಿ ಕೆಟ್ಟೋರು ಅನ್ನೋಕೆ ಅವ್ರು ನನ್ ಪ್ರೆಂಡ್ಸು ಅನ್ನೋದು ಅಡ್ಡಿಯಾಗತ್ತೆ. ಅವರ ಜೊತೆ ಸೇರೋ ಏನೋ ನಂಗೆ ಈ ಗುಟ್ಕಾ ತಿನ್ನೋ ಚಟ ಅಂಟಿಬಿಡ್ತು ನೋಡಿ. ಅದು ಹೆಂಗೋ ಮನೆಯವರಿಗೆ ಗೊತ್ತಾಗೋಯ್ತು ದಿನಾ ಅಪ್ಪ ಕೊಡ್ತಿದ್ದ ಹತ್ತು ರೂಪಾಯಿಗೂ ಕತ್ತರಿ ಬಿತ್ತು. ನನ್ ಗೆಳೆಯರು ಒಳ್ಳೇಯವ್ರು ಅಂತನ್ಸಿದ್ದು ಅದೇ ಟೈಮಲ್ಲಿ. ನನ್ ಪರಿಸ್ಥಿತಿ ನೋಡೋಕಾಗ್ದೇ ಮನೆಯಿಂದ ದಿನಾ ಒಂಚೂರು ಅಡಿಕೆ ತಗೊಂಡು ಬಾ ದುಡ್ಡು ಸಿಗತ್ತೆ ಅಂತ ಒಳ್ಳೇ ಐಡಿಯಾ ಕೊಟ್ರು. ಆ ಐಡಿಯಾ ಎಷ್ಟು ಚೆನ್ನಾಗಿತ್ತು ಅಂದ್ರೆ ನಂಗೆ ಸಾಕಾಗೋವಷ್ಟು ಗುಟ್ಖಾ ತಗೊಂಡ್ರೂ ತುಂಬಾ ದುಡ್ಡು ಉಳೀತಿತ್ತು. ಆವತ್ತೊಂದಿನ ರಾತ್ರಿ ಅಟ್ಟ ಹತ್ತಿದ್ದೆ, ಕೋಣೆಯಲ್ಲಿ ಅಪ್ಪ ತೀರಿಸಲಾಗದ ಸಾಲದ ಬಗ್ಗೆ ಮಾತಾಡ್ತಿದ್ರು, ಈ ಬಾರಿ ಚಾಲಿ ತೂಕವೇ ಇಲ್ಲ ಸಾಲ ಕಟಬಾಕಿಯಾಗಿದೆ ಅನ್ನೋವಾಗ ದನಿ ನಡುಗುತ್ತಿತ್ತು. ಹೊರಗೆ ಗವ್ವೆನ್ನೋ ಕತ್ತಲೆ, ಅದೆಲ್ಲೋ ನಾಯಿಗಳು ಕೂಗುತ್ತಿದ್ರೆ ಅಪ್ಪ ಅಮ್ಮನ ದನಿ ಮರೆಯಾಗಿತ್ತು. ನಂಗೆ ನಡುರಾತ್ರಿಯಲ್ಲಿ ಜ್ಞಾನೋದಯ. ಮುಂದೆ ಗುಟ್ಖಾ ಬಿಟ್ಟು ಅಪ್ಪನತ್ರ ನನಗಾಗಿ ಚಾಕಲೇಟ್ ತರೋದೂ ಬೇಡ ಅಂದೆ...
#ಶರತ್ ಹೆಗಡೆ

1 ಕಾಮೆಂಟ್‌: