ಆಶಯ

ಒಂದು ಪುಟ್ಟ ವಾಕ್ಯವೋ ಉದ್ಘಾರವೋ ಅಥವಾ ಇನ್ಯಾವುದೋ ಥರಹದ ಕಥೆಯ ಹುಟ್ಟುವಿಕೆಗೆ ಕಾರಣವಾಗಬಲ್ಲ ಕುಡಿಯನ್ನಿಟ್ಟುಕೊಂಡು ಅದರ ಸುತ್ತ ಓದುಗರ ಕಲ್ಪನೆಗೆ ಬಂದಂತೆ ಕಥೆಕಟ್ಟುವುದು "ಕುಡಿಗತೆಗಳು" ಗುಂಪಿನ ಮೂಲ ಉದ್ದೇಶ . ಹೀಗೆ ಒಂದೇ ಮೂಲದಿಂದ ಹೊರಟ ಹಲವಾರು ಕಥೆಗಳು ವಿವಿಧ ಆಯಾಮ ಪಡೆದುಕೊಳ್ಳುತ್ತಾ ಒಟ್ಟಾರೆಯಾಗಿ ನೋಡಿದಾಗ ಒಂದು ಕಥನಗುಚ್ಛವೇ ನಮ್ಮೆದುರು ತೆರೆದುಕೊಳ್ಳುತ್ತದೆ.ಇಂತಹ ಕಥೆಗಳನ್ನು ಓದಿ ಸಂಭ್ರಮಿಸಲಿರುವ ಪುಟ್ಟ ವೇದಿಕೆ ಇದು .ಆಫೀಸು-ಮನೆ ಸೇರಿದಂತೆ ನಿತ್ಯಜೀವನ ಜಂಜಾಟದಲ್ಲಿ ತೊಡಗಿರುವಾಗ ಆ ಏಕತಾನತೆಯಿಂದ ಹೊರಬಂದು ಒಂದು ಪುಟ್ಟ ಕಥೆ ಕಟ್ಟುವ ಮೂಲಕ ನಮ್ಮೊಳಗಿನ ಸೃಜನಶೀಲತೆಯನ್ನು ಪೋಷಿಸಿ ಮನಸ್ಸು ಬೆಚ್ಚಗಾಗಿಸಿಕೊಂಡರೆ ಈ ಪ್ರಯತ್ನ ಸಾರ್ಥಕ. smile emoticon .

ಬ್ಲಾಗ್ ಆರ್ಕೈವ್

ಸೋಮವಾರ, ಡಿಸೆಂಬರ್ 29, 2014

ಪ್ರಯತ್ನ-೬


ಕುಡಿ:"ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು."

1999 ಡಿಸೆಂಬರ್ ಸಮಯ.. ಕೊರೆಯುವ ಛಳಿ ಬೇರೆ. ಆದರೂ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಬಿಸಿಯ ವಾತಾವರಣ.. ಯುದ್ಧ ಬೀತಿ. ಅಲ್ಲಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾದಂತಹ ಕಾಲವದು. ಕಾರ್ಗಿಲ್ ಜನವಸತಿಯ ಸ್ವಾಬಿ ಹಳ್ಳಿಯನ್ನು ಪಾಕಿಸ್ತಾನಿ ಪಡೆಗಳಿಂದ ಭಾರತೀಯ ಸೇನಾಪಡೆಗಳು ತಮ್ಮ ವಶಕ್ಕೆ ಪಡೆದು ಅಲ್ಲಿ ತಿರಂಗಾ ಧ್ವಜವನ್ನು ಹಾರಿಸಿದ್ದವು. ಅಲ್ಲಿನ ಜನರೂ ಪಾಕಿಗಳ ದುರ್ನಡತೆಗೆ ಬೇಸತ್ತು ಭಾರತೀಯರ ಪಾಲಾದ ಬಗ್ಗೆ ಖುಷಿಪಡುತ್ತಿದ್ದರು. ಅಂತಹ ಸಮಯದಲ್ಲಿ ಭಾರತೀಯ ಸೇನಾ ತುಕಡಿಯ ದಲ್ಜೀರ್ ಸಿಂಗ್ ಗೂ ಪಾಕಿಸ್ತಾನಿ ತರುಣಿ ನಾಜಿಯಾಗೂ ಅದ್ಹೇಗೋ ಪ್ರೇಮಾಂಕುರವಾಯ್ತು. ಅವರ ಗಾಢ ಪ್ರೇಮಕ್ಕೆ ಆಗ ದೇಶ, ಜಾತಿ, ಜನ, ಸಮುದಾಯ ಯಾವುದೂ ಅಡ್ಡ ಬರದೆ ಎಲ್ಲವೂ ಸುಖಾಂತ್ಯವಾಗುವಂತಿತ್ತು. ಇನ್ನೆನು ಮದುವೆಯಾಗಬೇಕು ಅನ್ನುವ ಸಮಯಕ್ಕೆ ಸರಿಯಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ರಾಜಕೀಯ ಬೆಳವಣಿಗೆ ಹೊಂದಿ ಪರಸ್ಪರ ರಾಜಿ ಸಂಧಾನವಾಗಿ ಭಾರತೀಯ ಸೇನೆಯವರು ವಾಪಾಸ್ ಹೊರಡಲು ಆಜ್ಞೆಯಾಗಿತ್ತು. ದಲ್ಜೀರ್ ಸಿಂಗ್ ಗೆ ನಾಜಿಯಾ ಬಿಟ್ಟು ಹೊರಡಲು ಕಷ್ಟವಾದರೂ ಕರ್ತವ್ಯದ ಮೇರೆಗೆ ಆದಷ್ಟು ಬೇಗ ಅವಳನ್ನು ತನ್ನ ಬಳಿ ಕರೆಸಿಕೊಳ್ಳುತ್ತೇನೆಂದು ಮತ್ತು ಭಾರತ ಪಾಕಿಸ್ತಾನದ ನಡುವೆ ಸ್ನೇಹಪರ ಸಂಭಂಧ ಏರ್ಪಟ್ಟಿದೆಯೆಂದು ತಿಳಿದು ಖುಷಿಯಿಂದ ಭಾರತಕ್ಕೆ ಹೊರಡಲು ಸಿದ್ಧನಾದನು. ಇಂದಿಗೆ 15 ವರ್ಷವಾಯಿತು. ಇವತ್ತಿಗೂ ಅವನಿಗೆ ನಾಜಿಯಾ ನೋಡಲು, ಭೇಟಿಮಾಡಲು ಅವಕಾಶವಾಗಲಿಲ್ಲ. ಎರಡೂ ದೇಶದವರೂ ಅವನಿಂದ ಅವಕಾಶವನ್ನು ಕಸಿದುಕೊಂಡರು. ಅವಳನ್ನು ನೋಡಿದ ಕೊನೇಬಾರಿ ನಾಜಿಯಾ "ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು............." ಇವತ್ತಿಗೂ ಅವನು ಅವಳ ಪ್ರೇಮದಲ್ಲಿಯೇ ಅರೆ ಹುಚ್ಚನಾಗಿ ನಿಮ್ಯಾನ್ಸ್ ಕೊಠಡಿಯಲ್ಲಿ ತಾನೊಬ್ಬ ಯೋಧ ಎಂಬುದೂ ಮರೆತು ತನ್ನದೇ ಲಹರಿಯಲ್ಲಿ ಸುಖವಾಗಿದ್ದಾನೆ.
#ಎಂ.ಆರ್. ಸಚಿನ್
ಚಂದನಾ ಅಪ್ಪ ಅಮ್ಮನ ಒಬ್ಬಳೇ ಮಗಳು. ಹೆಸರಿಗೆ ತಕ್ಕಂತೆ ಸುಂದರಿ. ದಿನದ ಹೆಚ್ಚಿನ ಸಮಯವನ್ನು ಗೆಳತಿಯರೊಂದಿಗೆ ಕಳೀತಿದ್ಲು. ಮನಸಲ್ಲಿರೋ ರಾಜಕುಮಾರಂಗೆ ದಿನಕ್ಕೊಂದು ಬಣ್ಣಹಚ್ತಾ ಕನಸ್ ಕಾಣ್ತಿದ್ಲು. ಆ ದಿನ ಅವಳ ತಂದೆ ತಾಯಿ ಬೆಳಗ್ ಬೆಳಗ್ಗೆನೆ ಎಲ್ಲಿಗೊ ಹೊರ್ಟಿದ್ರು. ಇವ್ಳೂ ಇವ್ಳ ಪಾಡಿಗೆ ಕಾಲೇಜಿಗೆ ಹೋದ್ಲು. ಸಂಜೆ ಮನೆಗೆ ಬಂದ್ರೆ ಮನೆತುಂಬಾ ಜನ. ಮರುದಿನ ಅವಳ ಮದುವೆ! ಕಣ್ಣೀರು ಕಣ್ಣಿಂದ ಇಳಿಲಿಕ್ಕು ಸಮಯ ಇರಲಿಲ್ಲ. ಅದನ್ ವಿಚಾರಿಸೊ ಗೋಜಿಗೆ ಯಾರೂ ಹೋಗಲಿಲ್ಲ. ಅವಸರದ ಮದುವೆ ನಡೆದೇ ಹೋಯಿತು.ಕಾರಣ! ಗೊತ್ತಿಲ್ಲ. ಎಲ್ಲರ ಗುಸುಗುಸು ಮಾತ್ರ ಅವಳಿಗೆ ಅರ್ಥವೇ ಆಗಲಿಲ್ಲ. ಮನೆಯವರೊಪ್ಪಿದ ಮನವೊಪ್ಪದ ಗಂಡನೊಂದಿಗೆ ಅವಳು ನಿರ್ಭಾವಕತೆಯಿಂದ ಹೊರಟಳು. ತಂದೆತಾಯಿ ಸಮಾಧಾನದಿಂದ ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ ಬಸ್ಸು ಮೆಲ್ಲನೆ ಸಾಗುತ್ತಿತ್ತು....
#ಪ್ರಗತಿ ದಿಲೀಪ್
ಆಕೆ ರಸ್ತೆಯಂಚಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ .. ಬಸ್ ಮೆಲ್ಲನೆ ಮುಂದೆ ಸರಿಯುತ್ತಿತ್ತು. "ಥತ್ ಇವಳದ್ದು ಯಾವಾಗಲೂ ಇದೇ ಗೋಳು" ಎಂದು ಕಂಡಕ್ಟರ್ ಗೊಣಗಿದ. "ಏನಾಗಿದೆ ಅವಳಿಗೆ" ಎಂದರು ಬಸ್ಸಲ್ಲಿದ್ದ ಹಿರಿಯರೊಬ್ಬರು. "ಎಂಟು ವರ್ಷದ ಹಿಂದೆ ಹೀಗೆ ಟಾಟ ಮಾಡಿ ಕಳಿಸಿಕೊಟ್ಟ ಇವಳ ಮಗಳೊಬ್ಬಳು ಯಾವನದೋ ಜೊತೆ ಓಡಿ ಹೋದಳಂತೆ. ತಂದೆ ಸಂಬಂಧ ಕಳೆದುಕೊಂಡು ನಿರಾಳವಾದರು. ಆದರೆ ತಾಯಿ ಕರುಳು ನೋಡಿ ಇನ್ನು ಕಾಯುತ್ತಿದೆ.ಮಗಳು ಬರುತ್ತಾಳೇನೋ ಅಂತ, ಹೀಗೆ ಕೈ ಬೀಸುತ್ತಾ... " ಎಂದವನು ಟಿಕೆಟ್ ಗಾಗಿ ಮುಂದೆ ಹೋದ. ಹಿರಿಯರ ಪಕ್ಕ ಕುಳಿತ ಆವಂತಿಗೆ ಮತ್ತೊಮ್ಮೆ ತಿರುಗಿ ಅಮ್ಮನ ಮುಖ ನೋಡಬೇಕೆನಿಸಿತ್ತು
#ಸಂಧ್ಯಾ ಭಟ್ಟ
ಮಲೆನಾಡಿನ ಕುಗ್ರಾಮ ಸಂಪಿಗೇಪುರದಲ್ಲಿ ಇರುವುದೊಂದೇ ಮನೆ... ಮಡದಿ ತೀರಿಕೊಂಡು ವರ್ಷಗಳೇ ಕಳೆದಿದ್ದವು.. ಇದ್ದ ಒಬ್ಬನೇ ಮಗ ಉದ್ಯೋಗ ನಿಮಿತ್ತ ಶಹರ ಸೇರಿದ್ದ... ಕಾಲದ ಹಂಗಿಲ್ಲದೇ ಮನೆಯಿಂದ ಐದು ಮೈಲಿ ದೂರದ ರಸ್ತೆಗೆ ಬೆಳಗಿನ ಜಾವ ಐದು ಗಂಟೆಗೇ ಬಂದು ಆರರ ಆಸುಪಾಸು ಹಾದುಹೋಗುವ ಬಸ್ಸಿಗೆ ಕಾಯುವುದು ಭಟ್ಟರ ದಿನ ನಿತ್ಯದ ಅಭ್ಯಾಸ... ಶಹರದಿಂದ ಆಗಾಗ ಮಗ ಕಳಿಸುವ ಪತ್ರವನ್ನೋ ಏನಾದರೂ ಉಪಯುಕ್ತ ವಸ್ತುವನ್ನೋ ಬಸ್ ನಿರ್ವಾಹಕನಿಂದ ಪಡೆದು ಆನಂದಿಸುವುದು ಅದರ ಹಿಂದಿನ ಉದ್ದೇಶ... ಆದರೆ ಮಗನ ಕಡೆಯಿಂದ ಯಾವುದೇ ಪತ್ರವಾಗಲೀ, ವಸ್ತುವಾಗಲೀ ಬಾರದೇ ಮೂರು ತಿಂಗಳು ಕಳೆದಿದ್ದವು... ಇಂದು ಕೂಡ ಬಸ್ಸು ಬಂದ ತಕ್ಷಣ ಭಟ್ಟರು ಜೋರಾಗಿ ಕೈ ಬೀಸುತ್ತಿದ್ದರೆ ಬಸ್ಸು ನಿಲ್ಲದೇ ನಿದಾನವಾಗಿ ಸಾಗಿ ಹೋಯ್ತು.. ಎಂದಿನಂತೆ ನಿರ್ವಾಹಕ ಕೈ ಹೊರಚಾಚಿ ಏನೂ ಇಲ್ಲ ಎನ್ನುವ ಸನ್ನೆ ಮಾಡಿ ಬಸ್ಸಿನ ಒಂದು ಮೂಲೆಯಲ್ಲಿ ಇಟ್ಟಿದ್ದ ಟ್ರಂಕಿನತ್ತ ಕಣ್ಣು ಹರಿಸಿದ.. ಕೆಲಸದ ನಿಮಿತ್ತ ಹೊರದೇಶಕ್ಕೆ ಹೊರಟಿದ್ದ ಭಟ್ಟರ ಮಗನಿದ್ದ ವಿಮಾನ ಪತನವಾಗಿದ್ದು.. ವಿಮಾನದಲ್ಲಿದ್ದ ಎಲ್ಲರೂ ಮ್ರತದೇಹವೂ ಸಿಗದಂತೆ ಸುಟ್ಟು ಬೂದಿಯಾಗಿದ್ದು... ಅವನ ಸ್ನೇಹಿತನೊಬ್ಬ ಅವನಿಗೆ ಸೇರಿದ್ದ ವಸ್ತುವನ್ನೆಲ್ಲ ಟ್ರಂಕಿನಲ್ಲಿ ತುಂಬಿ ಭಟ್ಟರಿಗೆ ಸುದ್ದಿ ಮುಟ್ಟಿಸಲು ಹೇಳಿದ್ದು ಎಲ್ಲ ಕಣ್ಣ ಮುಂದೆ ಹಾದು ಕಣ್ಣು ತೇವವಾಯ್ತು.. ಏನು ಮಾಡುವುದು.. ಹೇಗೆ ಹೇಳುವುದು ತಿಳಿಯದೇ "ರೈಟ್ ರೈಟ್" ಅಂತ ಒಮ್ಮೆ ಕೂಗಿದ...
#ದಿಲೀಪ ಹೆಗಡೆ
ಈ ಘಟನೆಗೆ ಸುಮಾರು ಹತ್ತು ವರ್ಷ ಕಳೆದಿರಬಹುದು. ಅಂದು ಆಕೆ ನನ್ನ ಬಿಟ್ಟು ಹೊರಟಿದ್ದಳು, ಶಾಶ್ವತವಾಗಿ. ನಮ್ಮ ಐದು ವರ್ಷದ ಪ್ರೀತಿಗೆ ಎಳ್ಳು ನೀರು ಬಿಟ್ಟು ಹೋಗಲು ಅವಳಿಗೆ ಮನಸ್ಸಾದರೂ ಹೇಗೆ ಬಂತು ಅನ್ನುವುದೇ ತಿಳಿಯಲಿಲ್ಲ. ಮನಸ್ಸು ಭಾರವಾಗಿತ್ತು, ಕಣ್ಣುಗಳು ತುಂಬಿ ಬಂದಿತ್ತು. ಅಂದು ಆಕೆ ನನ್ನನ್ನು ಕೊನೆಯ ಬಾರಿಗೆ ಸಿಕ್ಕು ಇನ್ನೆಂದಿಗೂ ಮತ್ತೆ ಸಿಗದಿರು ಅಂತ ಬಸ್ಸೇರಿ ಹೊರಟಿದ್ದಳು. ಬಸ್ಸು ಮೆಲ್ಲನೆ ಸಾಗತೊಡಗಿತ್ತು, ಪಕ್ಕನೆ ಅದೇನೋ ಹೊಳೆದಂತೆ ರಸ್ತೆಯಂಚಿನಿಂದ ನಾ ಕೈ ಬೀಸತೊಡಗಿದ್ದೆ. ಕೆಲ ಕ್ಷಣದಲ್ಲೇ ಬಸ್ಸು, ಅವಳು ಇಬ್ಬರೂ ಕಣ್ಮರೆಯಾಗಿದ್ದರು. ಅವಳಿಗಾಗಿ ತಂದಿದ್ದ ಕಾಲ್ಗೆಜ್ಜೆ ನನ್ನ ನಡಿಗೆಯೊಂದಿಗೆ ಜೇಬಿನಲ್ಲಿ ತಾಳಹಾಕುತ್ತಿತ್ತು
#ಗಣೇಶ ಖರೆ

ರಮೇಶಣ್ಣಾ ಚೂರು ಬೇಗ್ ಕೊಡಿ, ಇಂದಂಗೆ ವಾರಾ ಆಯ್ತು ಡೈಲಿ ಲೇಟಾಗ್ತಿದೆ, ನಿಮ್ ಇಡ್ಲಿ, ಬನ್ಸ್ ರುಚಿಗೆ ಸಖತ್ ಪ್ಲ್ಯಾಟ್ ಆಗದೆ ಬಾಯಿ, ನಿನ್ನೇನೇ ಗುರ್ ಅಂತಿದ್ದಾ..ಜಿಕ್ರಿ, ಮೊದ್ಲೇ ಆ ಮುಲ್ಲಂಗೆ ನನ್ ಕಂಡ್ರೆ ಆಗದಿಲ್ಲ, ಇವತ್ತೂ ಲೇಟಾದ್ರೆ ನಿಲ್ಸದಿಲ್ಲ ಅಂದಿದ್ದ ...ಏನ್ ಅರ್ಜಂಟಿರತ್ತೋ ಬಡ್ಡಿಮಕ್ಳಿಗೆ,.. ಬೆಳಿಗ್ಗೆ ಎಂಟರ ಬಸ್ಸಿಗೇ ಹೋಗಬೇಕಾದ ಅನಿವಾರ್ಯ ಹೊಂದಿದ್ದ ನಟ್ರಾಜ ..ರಾಮಭವನದಲ್ಲಿ ಜೋರಾಗಿಯೇ ಪಟ್ಟಂಗ ಶುರುವಿಟ್ಟಿದ್ದ, ಪೇಟೇಲಿ ರೇಟು ಜಾಸ್ತಿ ಎಂಬ ಕಾರಣಕ್ಕೆ ಅವನ ಬೆಳಗಿನ ಬ್ಯಾಟಿಂಗು ಇಲ್ಲೇ ಆಗಬೇಕಿತ್ತು..ಇವನ ಈ ತಿಂಡಿ ಮುಗಿದು ಹೊರಡುವಷ್ಟರಲ್ಲಿಯೇ ಬಸ್ಸು ನೂರಿನ್ನೂರು ಮೀಟರ್ ಹೋಗಿ,.ಆಮೇಲ್ಯಾರೋ ಇಂವ ಓಡೋದ್ನೋಡಿ ನಿಲ್ಸೋರು..ಇಂವ ಆರಾಮ ತಿಂದು ಬರೋದ ನೋಡಿದ್ರೆ ಡ್ರೈವರ್ ಜಿಕ್ರಿಗೆ ಉರಿ.. ಇವತ್ತು ಏನಾರಾ ಮಾಡಿ ಬಸ್ ಹಿಡೀಬೇಕು ಎಂದು ಹಠತೊಟ್ಟೇ ಎಂಟು ಗಂಟೆಗೆ ಐದು ನಿಮಿಷ ಮೊದಲೇ ಬಂದು ತಿಂಡಿ ತಿಂದು ಅರ್ಧ ಪಟ್ಟಂಗವಾಗುವಷ್ಟರಲ್ಲಿಯೇ ಬಸ್ ಹಾರ್ನ ಕೇಳಿ ಕಸಿವಿಸಿಯಾದ ನಟ್ರಾಜು ಅರ್ಧಕ್ಕೇ ಕೈ ತೊಳೆದು ಬ್ಯಾಗೇರಿಸಿ ಕೈ ಬೀಸಿದರೂ, ತನಗೇನೂ ಗೊತ್ತೇ ಇಲ್ಲವೆಂದು ಬಸ್ಸು ಮಾಮೂಲಿ ವೇಗದಲ್ಲಿ ಚಲಿಸತೊಡಗಿತು... ಎಡಗನ್ನಡಿಯಲ್ಲಿ ನಟ್ರಾಜನ ಸಪ್ಪೆ ಮುಖ ನೋಡಿ ಜಿಕ್ರಿಯ ನಗು ಬಸ್ಸಿನ ಸೌಂಡಿನಲ್ಲಿ ಲೀನವಾಗತೊಡಗಿತು.. ಬಡ್ಡಿಮಗ, ಕೈ ಬೀಸ್ತಾ ಇದ್ದೆ ಬಸ್ಸು ಹೋಗ್ತಾ ಇತ್ತು.!! .ಮಾಡ್ತೀನಿ ಮುಲ್ಲಂಗೆ.ಎನ್ನುತ್ತಾ..ಮುಂದೆ ಯಾವುದೋ ಟ್ರಕ್ಕಿಗೆ ಜೋತು, ಬ್ಯಾಂಕಿಗೆ ನಡೆದ ನಟ್ರಾಜು ...ಪಲಕದ ಮೇಲೆ 'ವೆಹಿಕಲ್ ಲೋನಿನ' ಡೀಟೇಲ್ಸುಗಳ ಹುಡುಕತೊಡಗಿದ.....
#ಬಾಲಚಂದ್ರ ಭಟ್ಟ
ನನ್ನದು ಅವಳದು ೫ ವರ್ಷಗಳ ಪ್ರೀತಿ, ಅದ್ಯಾವ ಕಾರಣಕ್ಕೋ ಇಬ್ಬರ ಒಡನಾಟ ಒಮ್ಮೆಲೆ ತಟಸ್ಥವಾಗಿಬಿಟ್ಟಿತು. ಅವಳೊಂದಿಗಿನ ಮಾತು, ಮುನಿಸು, ಪ್ರೀತಿ ಯಾವುದಕ್ಕೂ ಜಾಗವಿಲ್ಲದಷ್ಟು ದೂರ ಸರಿದುಬಿಟ್ಟಳು. ಹೋಗುವುದಾದರೆ ಹೋಗು ಕಾರಣವೇನು ಎಂದು ಹೇಳಿ ಹೋಗು ಎಂದು ಎಷ್ಟು ಬಾರಿ ನನ್ನೊಳಗೆ ನನ್ನನ್ನೇ ಕೇಳಿಕೊಂಡಿದ್ದೆ. ಕಾರಣ ಹೇಳುವವಳು ಸಿಕ್ಕರೆ ತಾನೆ ಉತ್ತರಿಸಲು. ಇಂದು ಬಸ್ ಸ್ಟಾಪಿನಲಿ ನಿಂತಿದ್ದೆ, ಬಸ್ಸಿನ ಕಿಟಕಿಯಲಿ ಅವಳ ನೀಳಗೂದಲು ಕಾಣುತ್ತಿದ್ದಂತೆ ಎಚ್ಚೆತ್ತುಕೊಂಡೆ, ಕೈಬೀಸಿ ಕರೆದೆ ಆದರೂ ಬಸ್ ಮುಂದೆ ಸಾಗುತ್ತಿದೆ.... ದೂರಕ್ಕೆ ಸಾಗಿದೆ ರಸ್ತೆಯಂಚಿನಲೇ ನಿಂತು ಜೋರು ಕೈಬೀಸಿ ಕರೆಯುತ್ತಿದ್ದೇನೆ, ಅವಳೂ ತಿರುಗಿ ನೋಡಲಿಲ್ಲ ಇತ್ತ ಡ್ರೈವರ್ ಕೂಡ ಬಸ್ ನಿಲ್ಲಿಸಲಿಲ್ಲ ಹಾಗೇ ಮೆಲ್ಲನೆ ಸಾಗುತ್ತಿರುವ ಬಸ್ ನನ್ನೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕಲು ಬಿಡಲೇ ಇಲ್ಲ.
#ಸುಗುಣಾ ಮಹೇಶ್
ಬೆಳಕಿನ ಗತಿಯಲ್ಲಿ ಕಾಲ ಚಲಿಸೋವಾಗ ಕಿಟಕಿಯಿಂದ ತಲೆ ಹೊರ ಹಾಕಿ ನೋಡಿದೆ. ಹೊರಗೆ ನನ್ನದೇ ರೂಪಿನ ವ್ಯಕ್ತಿಗಳು ನಿಂತಿದ್ದರು. ಶೈಶವ್ಯದ ನಾನುಗಳೂ, ಬಾಲ್ಯ, ಯೌವನದ ನಾನುಗಳೂ ನನ್ನ ಗುರುತೇ ಇರದಂತೆ ನನ್ನನ್ನೇ ದಿಟ್ಟಿಸುತ್ತಿದ್ದರು! ನೆನಪಿಲ್ಲ, ಆ ನಾನುಗಳ ಕಣ್ಣಲ್ಲಿದ್ದ ಖುಷಿ ಈಗಿನ ನನ್ನಲ್ಲಿ ಮೊದಲೆಂದೂ ಇದ್ದ ನೆನಪಿಲ್ಲ. ನನಗೇನೂ ಆ ಖುಷಿಯ ಆಸೆಯಿಲ್ಲವೆಂದಲ್ಲ, ಆ ನಾನುಗಳ ಖುಷಿ ನನ್ನ ಹೊಟ್ಟೆ ಉರಿಸುತ್ತಿಲ್ಲವೆಂದೂ ಅಲ್ಲ. ಈ ನಾನೆಂಬ ಪ್ರಬುದ್ದನಿಗೆ ಕಾಲದ ಲೆಕ್ಕಾಚಾರದಲ್ಲಿ ಕೂಡಿಸುವುದಿದೆ ಹೊರತು ಕಳೆಯುವುದಿಲ್ಲ ಎಂಬ ಜ್ಞಾನವಿದೆ. ಈಗಿನ ನನಗೆ ಆಮಿಷಗಳಿವೆ, ಜವಾಬ್ದಾರಿಗಳೆಂಬ ನೆಪಗಳಿವೆ. ಹೊರಗಿಂದ ನನ್ನವೇ ನಾನುಗಳು ಕೈಬೀಸಿ ಟಾಟಾ ಮಾಡ್ತಿದ್ರೆ ಕಾಲನ ಬಸ್ಸು ವೇಗವಾಗಿ ಚಲಿಸುತ್ತಿತ್ತು... ಹೊಟ್ಟೆಯುರಿ ಹೆಚ್ಚಾಗಿ ಕಿಟಕಿಗಳನ್ನು ಮುಚ್ಚಿದೆ. ಕಾಲ ನಿಂತಂತಾಯ್ತು...
#ಶರತ್ ಹೆಗಡೆ
ನಮ್ಮ ಹಾಡಿಯಂತಹ ಹಳ್ಳಿಯಲ್ಲಿ ಹೈಸ್ಕೂಲ್ ಇರಲಿಲ್ಲ ನಮ್ಮ ತಂದೆ ಶಾಲೆ ಮಾಸ್ತರರು... ಅವರ ಉತ್ತೇಜನದ ಫಲವಾಗಿ ಅಜ್ಜಿ ಮತ್ತು ಅಮ್ಮನ ವಿರೋಧವಿದ್ದರೂ ಹಳ್ಳಿಯಿಂದ ಮೊದಲ ಹೆಣ್ಣು ಮಗಳಾಗಿ ಒಂದಷ್ಟು ಓದಿ ಹೈಸ್ಕೂಲ್ ಹತ್ತಿಯೇ ಬಿಟ್ಟೆ. ಪಕ್ಕದ ಪಟ್ಟಣಕ್ಕೆ ಊರಿಗೆ ಇದ್ದ ಬೆಳಿಗ್ಗೆಗೆ ಮತ್ತೆ ಸಂಜೆಗೆ ಒಂದೇ ಇದ್ದ ಕೆಂಪು ಬಸ್ ಹತ್ತಿ ಒಬ್ಬಳೇ ಎರಡು ತಾಸು ಪ್ರಯಾಣ ಮಾಡಿ ಶಾಲೆ ಮುಗಿಸುತ್ತಿದ್ದೆ! ಇತ್ತೀಚೆಗೆ ಅಮ್ಮ ಮಗಳು ದೊಡ್ಡವಳಾಗಿದ್ದಾಳೆ ಮದುವೆ ಮಾಡಬೇಕೆಂದು ಅಪ್ಪನಿಗೆ ದುಂಬಾಲು ಬಿದ್ದಿದ್ದಳು. ಅವಳ ಮಾತಿಗೆ ಅಪ್ಪ, ಸೊಪ್ಪು ಹಾಕುತ್ತಿರಲಿಲ್ಲ. ಮಗಳು ಚಿಕ್ಕವಳು ಇನ್ನೂ ಓದುತ್ತಿದ್ದಾಳೆ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದರು. ಈ ಬಾರಿ ನಾನು ೧೦ನೇ ತರಗತಿ ಪಬ್ಲಿಕ್ ಪರೀಕ್ಷೆ... ನನಗಂತೂ ಇಮ್ಮಡಿ ಉತ್ಸಾಹ... ಶಾಲೆಯ ಉಪಾಧ್ಯಾಯರುಗಳಿಗಂತೂ ನನ್ನ ಮೇಲೆ ಅಪರಿಮಿತ ನಂಬಿಕೆ... ಹಿಂದೆಂದೂ ದೊರೆಯದ rank ಈ ಬಾರಿ ನಮ್ಮ ಶಾಲೆಗೆ ದೊರೆಯುತ್ತದೆ ಎಂಬ ವಿಶ್ವಾಸ ಅವರದು. ನಾನು ಕೂಡ ಅಮ್ಮ ಹೇಳಿದ ಮನೆಗೆಲಸವನ್ನೆಲ್ಲಾ ಸರ ಸರನೆ ಮುಗಿಸಿ ಓದಲು ಕೂರುತ್ತಿದ್ದೆ. ಪೂರ್ವ ಪರೀಕ್ಷೆಗಳಲ್ಲೆಲ್ಲಾ ನೂರಕ್ಕೆ ನೂರು ತೆಗೆದೆ. ಮುಖ್ಯ ಪರೀಕ್ಷೆ ಬಂದೇ ಬಿಟ್ಟಿತು ಮೊದಲನೆಯದೇ ಕನ್ನಡ ಪರೀಕ್ಷೆ ಚೆನ್ನಾಗಿ ಓದಿ ಮನಗತ ಮಾಡಿಕೊಂಡಿದ್ದೆ... ಬೇಗನೇ ಎದ್ದು ಮನೆಯ ಮುಂದೆಯೇ ಇದ್ದ ಬಸ್ ನಿಲ್ದಾಣದಲ್ಲಿ ೮ ಘಂಟೆಯ ಬಸ್ ಗೆ ಕಾದಿದ್ದೆ... ದೂರದಲ್ಲಿ ಬಸ್ ನ ಉಬ್ಬಸದ ಸ್ವರ ಬರುತ್ತಿತ್ತು... ಹತ್ತಿರ ಬರುತ್ತಿದ್ದ ಆ ಬಸ್ ಬಸಿರಿಯಂತೆ ಕಾಣುತ್ತಿತ್ತು ಪಟ್ಟಣದ ಛತ್ರದಲ್ಲಿ ಬೆಳಿಗ್ಗೆಯೇ ಮದುವೆಗೆ ಹೊರಟ ಹಿಂದಿನ ಹಳ್ಳಿಯ ಮಂದಿ ಬಾಗಿಲಿನಲ್ಲಿ ತೂಗಾಡುತ್ತಿದ್ದರು... ಬಸ್ಸಿನ ಚಾಲಕನಿಗೆ ನಿಲ್ಲಿಸು ಎಂದು ಕೈ ಬೀಸಿದೆ... ಆತ ನನ್ನೆಡೆ ನಿಸ್ಸಹಾಯಕ ನೋಟ ಬೀರಿದ... "ರಸ್ತೆಯಂಚಿನಲ್ಲಿ ನಿಂತು ಜೋರಾಗಿ ನಾನು ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು..." ಮನೆಯ ಬಾಗಿಲಿನಲ್ಲಿ ನಿಂತಿದ್ದ ನನ್ನಮ್ಮನ ಕಣ್ಣು ದಿಬ್ಬಣದ ಬಸ್ ನೋಡಿ ಮಗಳ ಮದುವೆಯ ಕನಸು ಕಾಣುತ್ತಿತ್ತು... ನನ್ನ ಕಣ್ಣು ಮಂಜಾಗುತಿತ್ತು...
#ಸುರೇಶ ಶೆಟ್ಟಿ
ನಿನ್ನೆ ಜೀವನನೇ ಒಂದು ಓಟ ಅಂತ ಸಾಧುವೊಬ್ಬ ಹಾಡ್ಕೋತಾ ಹೋಗಿದ್ದು ನನ್ನ ಕುರಿತೇನಾ ಅಂತ ಅನಿಸ್ತಿದೆ ಇವತ್ತು. ಬೆಳಗ್ಗೆ ಎದ್ದಾಗಿಂದ ಎಲ್ಲಾ ಲೇಟು. ಸ್ನಾನಕ್ಕೆ ನೀರು ಕಾಯಿಸಿಕೊಳ್ಳೋಣ ಅಂದ್ರೆ ಕರೆಂಟಿಲ್ಲ. ಹಂಡೇಲೂ ಚೂರೇ ನೀರು. ಟ್ಯಾಂಕಿಯಿಂದ ಎತ್ತಿದ ತಣ್ಣೀರು ಸ್ನಾನವೇ ಸಾಹಸ. ನಾನಿಲ್ಲ ಅಂದ್ರೆ ಲೇಟಾಗಿ ಏಳ್ತೀಯ, ತಿಂಡಿ-ಗಿಂಡಿ ಮಾಡ್ಕೊಳ್ಳೋಕೆ ಹೋಗ್ಬೇಡ ಅಂತ ಅಮ್ಮ ಹೇಳಿದ ಮಾತು ಕೇಳ್ಬೇಕಿತ್ತು ಅಂತ ದೋಸೆ ಎರೆಯೋಕೆ ಅರ್ಧ ಘಂಟೆ ತಗೊಂಡಾಗ್ಲೇ ಆರ್ಥ ಆಗಿದ್ದು. ಲೇಟಾಗ್ಬಿಟ್ಟಿದೆ. ಬಸ್ಸು ಮಿಸ್ಸಾಗ್ಬಿಡ್ಬೋದು. ಸೈಕಲ್ಲಲ್ಲಿ ಹೋಗೋಣ್ವಾ ಅಂದಾಗ ನೆನ್ಪಾಯ್ತು, ಅದು ಪಂಚರಾಗಿ ಮೂರು ದಿನ ಆಗಿದೆ ಅಂತ. ಥತ್ತೇರಿ. ಕಾಲೇಜಿನ ಬಸ್ಟಾಪು ಮುಕ್ಕಾಲು ಕಿ.ಮಿ ದೂರ. ಬಸ್ಸು ಹೋಗೋಕೆ ಇನ್ನು ಆರು ನಿಮಿಷ ಇದೆ ಅಷ್ಟೆ. ಉಳಿದಿದ್ದೊಂದೇ ದಾರಿ. ಓಡು ಮಗ, ಓಡು. ಅಂತೂ ಉಸಿರೆಲ್ಲಾ ಬಾಯಿಗೆ ಬರೋ ತರ ಓಡಿ ಸ್ಟಾಪಿಗೆ ಬರೋ ಹೊತ್ತಿಗೆ ಬಸ್ಸೇ ಬಂದು ಬಿಡೋದೇ ? ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು. ಕೈ ಮಾಡ್ದಲ್ಲಿ ನಿಲ್ಸೋದಲ್ವಾ ?ಸ್ಲೋನೇ ಇದ್ರೂ ಹಾಳಾದವ್ನು ಮುಂದೆ ಹೋಗ್ಬಿಟ್ಟಿದ್ದಾನೆ. ಹತ್ತುತೀನೋ ಇಲ್ವೋ ಅನ್ನೋ ಅನುಮಾನದಲ್ಲಿರೋ ತರ ಅಂತೂ ನಿಲ್ಸಿದ !ಓಡುಮಗ ಓಡುಮಗ. ಈ ಬಸ್ಸು ಬಿಟ್ಟು ಹೋದ್ರೆ ಇವತ್ತಿನೀ ಓಡುವಿಕೆಗೆ ಎಲ್ಲಿ ಮುಕ್ತಾಯವೋ.
#ಪ್ರಶಸ್ತಿ ಪ್ರಭಾಕರ
ಹೆಣ್ಣಾಗಿ ಹುಟ್ಟಿದಕ್ಕೆ ಖುಷಿ ಇದ್ದರೂ ಕೆಲವು ಸಲ ಥೂ ಯಾಕಪ್ಪ ಹುಟ್ಟಿದೆ ಹೆಣ್ಣಾಗಿ ಅನ್ನಿಸುತ್ತೆ...ನನ್ನಪ್ಪನಿಗೆ ಗಂಡು ಮಕ್ಕಳು ಇಲ್ಲ ಎಂಬ ಕೊರಗನ್ನು ನೀಗಿಸಲು ನಾನು ಹುಡುಗನ ಹಾಗೆ ಬೆಳೆದೆ. ಅಪ್ಪನಿಗೆ ಕಷ್ಟ ಆದರೂ ನಮ್ಮ ಹಳ್ಳಿಯಿಂದ ಐದು ಕಿಲೊಮೀಟರ್ ದೂರದಲ್ಲಿದ್ದ ಪಟ್ಟಣದ ಕಾಲೇಜಿಗೆ ಸೇರಿಸಿದ್ದರು. ದಿನಾ ಕಾಲೇಜಿಗೆ ಊರಿಗೆ ಇದ್ದ ಒಂದೆ ಬಸ್ಸು ಚೆನ್ನಬಸವೇಶ್ವರ ಬಸ್ಸಿನಲ್ಲೆ ಹೋಗುತ್ತಿದ್ದೆ. ಬಸ್ ತುಂಬಿ ಹೋಗುತ್ತಿದ್ದರಿಂದ ಡ್ರೈವರ್ ಹಿಂದೆ ಖಾಯಂ ಆಗಿ ನಿಲ್ಲುತ್ತ ಇದ್ದೆ. ಡ್ರೈವರ್ ಕನ್ನಡಿಯಲ್ಲಿ ಯಾವಾಗಲೂ ನನ್ನನ್ನೆ ನೋಡುತ್ತಿದ್ದ. ದಿನಕಳೆದಂತೆ ಅವನ ವರ್ತನೆ ಬದಲಾಗತೊಡಗಿತು. ಒಂದಿನ ಮೈ ಮುಟ್ಟಿದನೆಂದು ಅವನಿಗೊಮ್ಮೆ ಕೆಂಗಣ್ಣು ಬಿಟ್ಟು ಅವನ ಬಸ್ಸಿಗೆ ನಮಸ್ಕಾರ ಹಾಕಿ ಅಪ್ಪನೆದುರು ಹಠ ಮಾಡಿ ಸೈಕಲ್ ಕೊಡಿಸಿಕೊಂಡು ಅದರಲ್ಲೆ ಕಾಲೇಜಿಗೆ ಹೋಗಿ ಬರಲು ಶುರುಮಾಡಿದೆ. ಆಗ ಬೇಸಿಗೆ ಆದ್ದರಿಂದ ಮಳೆಗಾಲದ ಅರಿವಿರಲಿಲ್ಲ. ಮಳೆಗಾಲ ಶುರುವಾಯಿತು. ಸೈಕಲ್ ನಲ್ಲಿ ಹೋಗಲು ಆಗುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಕಾಲೇಜಿಗೆ ಚಕ್ಕರ್ ಸಹ ಆಗುತಿತ್ತು. ಪರೀಕ್ಷೆ ಶುರುವಾಯಿತು...ಮುಂಜಾನೆ ಹಿಡಿದ ಮಳೆ ಜಡಿ ಕಡಿಮೆ ಆಗಲೇ ಇಲ್ಲ...ಬಸ್ಸಿನಲ್ಲೆ ಕಾಲೇಜಿಗೆ ಹೋಗೊಣವೆಂದು "ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು............ನಾ ಆ ದಿನ ಬಿಟ್ಟ ಕೆಂಗಣ್ಣಿಗೆ ಡ್ರೈವರ್ ಬಸ್ ನಿಲ್ಲಿಸಲೇ ಇಲ್ಲ."
#ಮಹೇಶ ಸಿದ್ದಲಿಂಗಪ್ಪ
ನಿನ್ನೆ ಮೊನ್ನೆಯಷ್ಟೇ ಅಂಬೆಗಾಲು ಹಾಕುತ್ತಿದ್ದ ಕಂದ ಇಂದು ಶಾಲೆಗೆ ಹೋಗುವಷ್ಟು ದೊಡ್ಡವನಾಗಿದ್ದಾನೆ .. ಕುರುಡು ಕಾಂಚಾಣದ ಬೆನ್ನು ಬಿದ್ದು ಮಗನ ಆಟೋಟಗಳೆ ಕಾಣದಷ್ಟು ಕುರಡನಾಗಿದ್ದೆನಾ ಅನ್ನಿಸಿ ಅರಿಯದೆ ಕಣ್ಣಂಚು ಒದ್ದೆಯಾಗಿತ್ತು .. ಬಸ್ ದೂರ ಸಾಗಿದ್ದರು ಇನ್ನು ಜೋರಾಗಿ ಕೈ ಬೀಸುತ್ತಲೇ ಇದ್ದೆ .
#ಶ್ರೀಧರ ಭಟ್ಟ
ಊರಿನಿಂದ ಬಂದಿದ್ದ ಹಳೆಯ ಗೆಳೆಯ ಕುಳಿತ ಬಸ್ಸು ಮೆಲ್ಲನೆ ಮುಂದೆ ಸಾಗುತ್ತಿದ್ದರೆ ಮನಸ್ಸು ಹಿಂದಕ್ಕೋಡುತ್ತಿತ್ತು. ಆಡಬೇಕಿದ್ದ ಸಾವಿರ ಮಾತುಗಳು ಎರಡು ಸಿನಿಮಾ, ಮೂರು ಡಿನ್ನರ್ ಗಳ ನಡುವೆ ಕಳೆದು ಹೋಗಿದ್ದವು. ಹಳೆಯದೆಲ್ಲ ಅರ್ಥಹೀನ, ವರ್ತಮಾನ ಕೃತಕ, ಮರುದಿನ ಆಫೀಸಿನಲ್ಲಿ ಮಾಡಬೇಕಿದ್ದ ಕೆಲಸ ಮಾತ್ರ ಶಾಶ್ವತ ಸತ್ಯ ಎಂದೆನಿಸುತ್ತಿತ್ತು. ನಾನು ಮಾತಾಡದಿರುವುದು ಕಂಡು ಅವನೂ ಮಾತು ನಿಲ್ಲಿಸಿದ್ದ. ಅವನ ಪಾದರಸದಂಥ ವ್ಯಕ್ತಿತ್ವಕ್ಕೂ ನನ್ನ ಮಂಕುತನ ಬಡಿದುಬಿಟ್ಟಿತು. ಎರಡು ಸಿನಿಮಾ, ಮೂರು ಡಿನ್ನರುಗಳಲ್ಲಿ ಅವನ ಬೆಂಗಳೂರು ಪ್ರವಾಸ ಮುಗಿದುಬಿಟ್ಟದ್ದು ನನಗೆ ಹೊಳೆದದ್ದು ಅವನು ವಾಪಾಸು ಊರಿಗೆ ಬಸ್ಸು ಹತ್ತಿದಾಗಲೇ. ಟಾಟಾ ಆದರೂ ಮಾಡೋಣ ಎಂದುಕೊಂಡೆ. ರಸ್ತೆಯಂಚಿನಲ್ಲಿ ನಿಂತ ನಾನು ಜೋರಾಗಿ ಕೈ ಬೀಸುತ್ತಿದ್ದರೆ, ಅವನು ಕುಳಿತ ಬಸ್ಸು ಮೆಲ್ಲನೆ ಸಾಗುತ್ತಿತ್ತು. ಬಹುಷಃ ನನ್ನ ಪ್ರಪಂಚ ಬದಲಾಗಿರುವುದು ಅವನಿಗೂ ಗೊತ್ತಾಗಿರಬೇಕು; ಅವನು ನನ್ನತ್ತ ನೋಡಲೇ ಇಲ್ಲ.
#ಕಿರಣ ಕುಮಾರ
ಉದ್ಯಾನ ನಗರಿಯ ಕಾಲೇಜೊಂದರಲ್ಲಿ ಓದುತ್ತಿದ್ದ ಮಗನ ನೋಡಲು ಬಂದ ತಾಯಿಯನ್ನ ಮಗ ವಾಪಸ್ ಮನೆಗೆ ಕಳಿಸಲು ಬಸ್ ನಿಲ್ದಾಣಕ್ಕೆ ಹೋಗಿದ್ದ ...ಕರುಳು ಹಿಂಡುವಷ್ಟು ನೋವು..ಕಣ್ಣಿನಲ್ಲಿ ಜಿನುಗುವ ನೀರು ಹಾಗೂ ಅದನ್ನು ಮರೆಮಾಚುವಂಥಹ ಗಡಿಬಿಡಿ..ಅಂತೂ ಬಸ್ ಹೊರಟೇ ಬಿಟ್ಟಿತು..ದುಃಖ ಮಡುಗಟ್ಟಿತ್ತು...ತಾಯಿಯ ಕಣ್ಣೀರ ಕಂಡ ಮಗನ ಕಣ್ಣು ಒದ್ದೆಯಾಗಿ ಗಂಟಲು ಬಿಗಿದಿತ್ತು.."ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ ಬಸ್ಸು ಮೆಲ್ಲನೆ ಸಾಗುತ್ತಿತ್ತು.."
#ಪ್ರಥ್ವಿರಾಜ ಕಶ್ಯಪ
ಪುಟ್ಟ, "ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು.....ಮರೆಯಾಗುವವರೆಗೆ ಕೈ ಬೀಸಿದ.. ಇದೇನು ಹೊಸತಲ್ಲ ಪ್ರತಿದಿನವೂ ಪುಟ್ಟ ಇದೇ ರೀತಿ ಕೈ ಬೀಸಿಯೇ ಬೀಸುತ್ತಾನೆ.ಒಂದಲ್ಲ ಒಂದು ದಿನ ಯಾರಾದರೂ ನನ್ನ ಕೈ ಬೀಸುವಿಕೆಗೆ ಉತ್ತರವಾಗಿ ನನಗೂ ಕೈ ಬೀಸಿ ಮುಗುಳ್ನಕ್ಕಾರು ಎಂಬ ಅವನ ಆಸೆಯ ಕುಡಿಯಿನ್ನೂ ನಂದಿಲ್ಲ ..
#ಅನಿತಾ ನರೇಶ ಮಂಚಿ
ಬಸ್ಸು ಮೆಲ್ಲನೆ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಿತ್ತು, ಅವಳು ತನ್ನ ಕನಸು ನನಸಾಗುತ್ತಿರುವ ಖುಷಿಯಲ್ಲಿ ಮಾಯಾನಗರಿಯತ್ತ ಹೆಜ್ಜೆಯಿಟ್ಟದ್ದಳು. ಇವನು ಜೋರಾಗಿ ಕೈ ಬೀಸುತ್ತ ತನ್ನ ಕನಸು ಕೈ ಜಾರಿದ ದುಃಖವನ್ನು ಮರೆಮಾಚಿದ್ದನು.
#ಸೂರಿ ಸರಿ ತಪ್ಪುಗಳ ನಡುವೆ
ಇಡೀ ಊರಿನ ಮಂದಿ ರಸ್ತೆ ಬದಿಯಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ.. ಬಸ್ಸು ನಿದಾನವಾಗಿ ಸಾಗುತ್ತಿತ್ತು... ಸರ್ಕಾರಿ ಕಛೇರಿ ಮುಂದೆ ಧರಣಿ ಕುಳಿತು ಯಾವ ಆಮಿಶಕ್ಕೂ ಜಗ್ಗದೇ ತಮ್ಮ ಊರಿಗೆ ಬಸ್ಸು ಬರುವಂತೆ ಮಾಡಿದ ಶ್ಯಾಮರಾಯರು ಸಂತಸದಿಂದ ಭೀಗುತ್ತಿದ್ದರು.... ಇದೆಲ್ಲ ಆಗಿ ಕೆಲ ದಶಕಗಳೇ ಕಳೆದಿವೆ... ಅಂದು ಬಂದ ಬಸ್ಸು ಊರಿನ ಸಂಪೂರ್ಣ ಚಿತ್ರಣವನ್ನೇ ಬದಲಿಸಿತು... ಮೊದಮೊದಲು ಶಹರಕ್ಕೆ ಸಂಪರ್ಕ ಕಲ್ಪಿಸಿದ ಕಾಮದೇನುವಿನಂತೆ ಕಂಡ ಬಸ್ಸು ಈಗೀಗ ಹಿರಿಯರ ಕಣ್ಣಲ್ಲಿ ತಮ್ಮ ಕರುಳ ಕುಡಿಗಳ ಕಡಿದ ಕಳನಾಯಕನಂತೆ ಕಾಣುತ್ತಿದೆ... ಅಪ್ಪ ಸಮಾಜ ಸೇವೆ ಅದೂ ಇದು ಮಣ್ಣು ಮಸಿ ಅಂತ ಊರಿಗೆ ಬಸ್ಸು ಬರೋ ಹಾಗೆ ಮಾಡದಿದ್ರೆ ನಮಗೆ ಇವತ್ತು ಈ ಗತಿ ಬರ್ತಿರ್ಲಿಲ್ಲ... ಮುಖಕ್ಕೆ ಮಸೀ ಬಳ್ದು ಹೋದ್ಳಲ್ಲೇ ನಿನ್ನ ಮಗಳು.. ಓಡಿ ಹೋಗೋಕೆ ಆ ಬಸ್ಸಿನ ಡ್ರೈವರೇ ಬೇಕಿತ್ತ.. ಮಡದಿ ಎದುರು ಎಗರಾಡುತ್ತಿದ್ದ ಮಗನ ಕೂಗು.... ಹಾಸಿಗೆಯಲ್ಲಿ ಕೊನೆದಿನಗಳನ್ನು ಎಣಿಸ್ತಿರೋ ಶ್ಯಾಮರಾಯರ ಕಿವಿಗೆ ಬೇಡವೆಂದರೂ ಬೆಂಕಿಯಂತೆ ಬಡಿಯುತ್ತಿತ್ತು.
#ದಿಲೀಪ ಹೆಗಡೆ
ನಿನ್ನ ಬಗ್ಗೆ ನನಗೆ ಈಗ ಕೇವಲ ಸ್ನೇಹಿತನೆಂಬ ಭಾವವಿದೆಯೇ ಹೊರತು ಬೇರಾವ ಭಾವನೆಗಳಿಲ್ಲ. ಹಿಂದೆಂದೂ ಪಿ.ಯು.ಸಿ. ಯಲ್ಲಿ ಏನೂ ಅರಿಯದ ವಯಸ್ಸಿನಲ್ಲಿ ಆಕರ್ಷಣೆಗೆ ಒಳಗಾಗಿ ಪ್ರೇಮ ಪತ್ರಗಳು ವಿನಿಮಯವಾಗಿದ್ದು ನಿಜವಿದ್ದರೂ, ಅದೆಲ್ಲಾ ಹಳೆಯ ಕಥೆ. ನಾನು ಈಗ ಇಂಜಿನೀಯರಿಂಗ್ ಮುಗಿಸಿ ಕೆಲಸಕ್ಕೆ ಸೇರಲು ಹೋಗ್ತಾ ಇದ್ದೀನಿ. ನೀನು ಏನಾದರೂ ಸಾಧನೆ ಮಾಡು. ನನ್ನ ಬಗ್ಗೆ ಇಲ್ಲದ ಆಲೋಚನೆಗಳನ್ನೆಲ್ಲಾ ಮನಸಲ್ಲಿಟ್ಟುಕೊಂಡು ಕನಸು ಕಾಣಬೇಡ” ಎಂದು ಅತ್ತೆಯ ಮಗಳು ನಿರ್ಭಾವುಕಳಾಗಿ ಹೇಳಿದಳು. ಅಷ್ಟರಲ್ಲಿ ಬಸ್ಸು ಬಂತು. ಏನೂ ಮಾತನಾಡದೇ ಮೂಕ ಪ್ರಾಣಿಯ ಹಾಗೆ ಮನದೊಳಗೆ ಬೇಗುತ್ತಾ, ಅವಳ ಲಗ್ಗೇಜನ್ನು ಬಸ್ಸಿನಲ್ಲಿರಿಸಿ, ಕಂಡಕ್ಟರ್ ಗೆ ಹೇಳಿ ಬೆಂಗಳೂರಿಗೆ ಟಿಕೆಟ್ ತೆಗೆಸಿ ಅವಳ ಕೈಗಿತ್ತನು. ಬಸ್ಸು ಹೊರಟಿತು. "ರಸ್ತೆಯಂಚಿನಲ್ಲಿ ನಿಂತು ಜೋರಾಗಿ ಕೈ ಬೀಸುತ್ತಿದ್ದರೆ, ಬಸ್ಸು ಮೆಲ್ಲನೆ ಸಾಗುತ್ತಿತ್ತು.. ಅವಳ ಮನಸ್ಸು ನಿರಾಳವಾಗಿದ್ದರೆ, ಇಲ್ಲೊಂದು ಮನಸ್ಸಿನಲ್ಲಿ ಸುನಾಮಿಯೊಂದು ಅಪ್ಪಳಿಸಿತ್ತು.
#ಶಿವಶಂಕರ ವಿಷ್ಣು ಯಳವತ್ತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ