ಆಶಯ

ಒಂದು ಪುಟ್ಟ ವಾಕ್ಯವೋ ಉದ್ಘಾರವೋ ಅಥವಾ ಇನ್ಯಾವುದೋ ಥರಹದ ಕಥೆಯ ಹುಟ್ಟುವಿಕೆಗೆ ಕಾರಣವಾಗಬಲ್ಲ ಕುಡಿಯನ್ನಿಟ್ಟುಕೊಂಡು ಅದರ ಸುತ್ತ ಓದುಗರ ಕಲ್ಪನೆಗೆ ಬಂದಂತೆ ಕಥೆಕಟ್ಟುವುದು "ಕುಡಿಗತೆಗಳು" ಗುಂಪಿನ ಮೂಲ ಉದ್ದೇಶ . ಹೀಗೆ ಒಂದೇ ಮೂಲದಿಂದ ಹೊರಟ ಹಲವಾರು ಕಥೆಗಳು ವಿವಿಧ ಆಯಾಮ ಪಡೆದುಕೊಳ್ಳುತ್ತಾ ಒಟ್ಟಾರೆಯಾಗಿ ನೋಡಿದಾಗ ಒಂದು ಕಥನಗುಚ್ಛವೇ ನಮ್ಮೆದುರು ತೆರೆದುಕೊಳ್ಳುತ್ತದೆ.ಇಂತಹ ಕಥೆಗಳನ್ನು ಓದಿ ಸಂಭ್ರಮಿಸಲಿರುವ ಪುಟ್ಟ ವೇದಿಕೆ ಇದು .ಆಫೀಸು-ಮನೆ ಸೇರಿದಂತೆ ನಿತ್ಯಜೀವನ ಜಂಜಾಟದಲ್ಲಿ ತೊಡಗಿರುವಾಗ ಆ ಏಕತಾನತೆಯಿಂದ ಹೊರಬಂದು ಒಂದು ಪುಟ್ಟ ಕಥೆ ಕಟ್ಟುವ ಮೂಲಕ ನಮ್ಮೊಳಗಿನ ಸೃಜನಶೀಲತೆಯನ್ನು ಪೋಷಿಸಿ ಮನಸ್ಸು ಬೆಚ್ಚಗಾಗಿಸಿಕೊಂಡರೆ ಈ ಪ್ರಯತ್ನ ಸಾರ್ಥಕ. smile emoticon .

ಬ್ಲಾಗ್ ಆರ್ಕೈವ್

ಸೋಮವಾರ, ಏಪ್ರಿಲ್ 27, 2015

ಪ್ರಯತ್ನ-೮


ಕುಡಿ:"ಹೊಸಲಿನ ಮುಂದೆ ರಂಗೋಲಿಯ ಚುಕ್ಕಿ ತಪ್ಪಿತ್ತು"
(ಕುಡಿಕೃಪೆ:ಚಿನ್ಮಯ ಭಟ್ಟ)

"ಪ್ರಿಯತಮನ ಕಾಯುವಿಕೆಯ ಕಾತುರದಲ್ಲಿ.....
ತಿಂಗಳಾದ ನಂತರ ಕೆಲಸದ ನಿಮಿತ್ತ ಪರದೇಶಕ್ಕೆ ಹೋದ ಪ್ರಿಯತಮನು ತಿರುಗಿ ಮನೆಗೆ ಬರುವ ಸಂದರ್ಭವದು.. ಆ ರಾತ್ರಿಯೆಲ್ಲಾ ಕಣ್ಣಿಗೆ ನಿದಿರೆಯಿಲ್ಲ,ಸದಾ ಕಣ್ಣಿನಲ್ಲಿ ಮುಂಬರುವ ಸಾವಿರಾರು ಸುಂದರ ಕ್ಷಣಗಳು.... ಕೊನೆಗೂ ರಾತ್ರಿ ಕಳೆದು ಮುಂಜಾನೆಯ ಸೂರ್ಯ ಉದಯಿಸುವ ಮುನ್ನವೇ ಸುಂದರ ದಿನವನ್ನು ನೆನೆದು ಮನೆಯ ಅಂಗಳದಲ್ಲಿ ನೀರು ಚುಮುಕಿಸಿ ಅವನ ಬರುವಿಕೆಯ ಮಂಪರಿನಲ್ಲಿ ಹೊಸಲಿನ ಮುಂದೆ ರಂಗೋಲಿಯ ಚುಕ್ಕಿಯೇ ತಪ್ಪಿತು...."
#ರಮೇಶ್ ರಾಮಿ
ಅವಳಿಗೆ ಸದಾ ಅವನದೇ ಧ್ಯಾನ... ಮದುವೆಯಾದ ಮೂರೇ ತಿಂಗಳಿಗೆ ಗಂಡ ದಂಡಿನ ಕರೆಗೆ ಓಗೊಟ್ಟಿದ್ದಾನೆ ನಾಡಿನ ಗಡಿಯಲ್ಲಿ ಕಾದಾಡುತ್ತಿದ್ದಾನೆ... ಈಗೀಕೆಗೆ ಎರಡು ತಿಂಗಳು. ಸಂಜೆಗೇ ಮನೆಯ ಮುಂದೆ ಸಗಣಿ ನೀರು ಹಾಕಿ ಚಂದದ ರಂಗೋಲಿ ಇಡುವ ವಾಡಿಕೆ... ಬೆಳಗಿನಿಂದ ಅವಳ ಮನದಲ್ಲೆಲ್ಲಾ ತಳಮಳ... ಅಂಗಳದಿ ನಿಂದು ಅಂದಾಕೆ ಬಿಡಿಸಿದ "ಹೊಸಲಿನ ಮುಂದಿನ ರಂಗೋಲಿಯ ಚುಕ್ಕಿ ತಪ್ಪಿತ್ತು" ಬಾನಂಗಳದಿ ಅಂದೇ ಮೂಡಿದ ಹೊಚ್ಚಹೊಸ ಚುಕ್ಕಿಯೊಂದು ಮನದನ್ನೆಯತ್ತ ಕಳವಳದಿಂದ ದಿಟ್ಟಿಸುತ್ತಿತ್ತು!
#ಸುರೇಶ ಶೆಟ್ಟಿ
ಮನದೊಳಗೆ ತನ್ನ ನೋಡಲು ಬರುವ ಹುಡುಗ ಹೇಗಿರಬಹುದೆಂಬ ಕಾತುರ ಭಯ ಎರಡೂ ಇತ್ತು. ಪಕ್ಕದ ಮನೆಯ ಗಂಡಸಿನ ಅಸಹ್ಯ ನೋಟ ಪ್ರತಿ ದಿನ ಇರುತಿತ್ತು. ಅಮ್ಮ ಅಂದಳು ಪೇಟೆಗೆ ಹೋಗಿ ಬರುವೆನೆಂದು. ಗಂಡಸಿಗು ಆ ಮಾತು ಕಿವಿಗೆ ಬಿದ್ದಿತ್ತು. ಕಳ್ಳ ಬೆಕ್ಕು ಹಾಲ ಕುಡಿದು ಮನೆಯಿಂದ ಮೆಲ್ಲನೆ ಹೊರಬಂತು. ಪ್ರತಿ ದಿನದಂತೆ ಇಡುತ್ತಿದ್ದ ಹೊಸಲಿನ ಮುಂದೆ ರಂಗೋಲಿಯ ಚುಕ್ಕಿ ತಪ್ಪಿತ್ತು..
#ನಿರ್ಜೀವ(ಸಮನ್ವಿತಾ ಹೊಳ್ಳ)
ವಧುಪರೀಕ್ಷೆಗೆಂದು ಬಂದ ಗಂಡುಗಳೆಲ್ಲಾ 'ಹುಡುಗಿ ಕಪ್ಪು' ಎಂದು ನಿರಾಕರಿಸಿ ಹೋಗುತ್ತಿದ್ದರು.... ಆದರೆ ಮೊನ್ನೆ ಬಂದ ಹುಡುಗ ಮೆಚ್ಚಿ ಒಪ್ಪಿಗೆ ನೀಡಿದ್ದು ಹುಡುಗಿಗೆ ಆಗಸದಲ್ಲಿ ತೇಲಿದ ಸಂಭ್ರಮ.... ಹುಡುಗಿಯೊಂದಿಗೆ ಮಾತನಾಡಬೇಕೆಂದು ಹಿಂದಿನದಿನ ಬಂದು ಮಾತನಾಡಿ ಹೋಗಿದ್ದ... ಅವನಾಡಿದ ಮಾತು ಇನ್ನೂ ಕಿವಿಯಲ್ಲಿ ಪ್ರತಿಧ್ವನಿಸುತ್ತಿದೆ.... "ಮದುವೆಯ ನಂತರ ನೌಕರಿ ಬಿಡುವಂತಿಲ್ಲ .... ಬರುವ ಸಂಬಳವನ್ನೆಲ್ಲಾ ಸಂಪೂರ್ಣವಾಗಿ ತನಗೇ ನೀಡಬೇಕು".... ಹುಡುಗ ಒಪ್ಪಿದ್ದು ತನ್ನನ್ನಲ್ಲ ತನ್ನ ಸಂಬಳವನ್ನು ಎಂಬ ವಿಚಾರ ತನ್ನ ಲೆಕ್ಕಾಚಾರವನ್ನು ತಪ್ಪಿಸಿತ್ತು... ಅದೇ ಚಿಂತೆಯಲ್ಲಿ ಹೊಸಲಿನ ಮುಂದೆ ರಂಗೋಲಿಯ ಚುಕ್ಕಿ ತಪ್ಪಿತ್ತು.
#ಸಂಧ್ಯಾ ಕೌಶಿಕ್
ಬೆಳ್ಳಂ ಬೆಳ್ಳಗ್ಗೆ ಅವನು ಕರೆ ಮಾಡಿದ್ದ, ಯಾಕೋ ಬೇಸರದಲ್ಲಿದ್ದಂತಿತ್ತು, ಮಾತು ಮುಂದುವರಿಸುರಷ್ಟರಲ್ಲೇ ಅಮ್ಮಾ ಬಾಗಿಲಿಗೆ ರಂಗೋಲಿ ಬಿಡಿಸು ಹೋಗೇ ಎಂದು ಗದರಿಬಿಟ್ಟಳು. ಮಾತು ಮುಂದುವರಿಸಿಲ್ಲ, ಅವನ ರಂಗಿನ ಮಾತು ಕೇಳಲೇ ಇಲ್ಲ. ಏಕೆ ಕರೆ ಮಾಡಿದ್ದೋ ತಿಳಿಯುತ್ತಿಲ್ಲ, ಅದು ಈ ಹೊತ್ತಿನಲ್ಲಿ ಎಂದೂ ಕರೆಮಾಡದವ ಇಂದು ಮಾಡಿದ್ದಾನೇ ಏನೋ ಇರಬಹುದು. ಅವನದೇ ಧ್ಯಾನದಲಿ ಬಾಗಿಲು ಸಾರಿಸಿ ರಂಗೋಲಿಯಲಿ ೧೨ರಿಂದ ೪ರ ಚುಕ್ಕಿಯಿಟ್ಟಾಯಿತು ಹೂವಿನ ಚಿತ್ತಾರ ಬಿಡಿಸಬೇಕಿತ್ತು ಯಾಕೋ ಚಿತ್ತಾರ ಮೂಡುತ್ತಲೇ ಇಲ್ಲ ರಂಗೋಲಿಯ ಚುಕ್ಕಿತಪ್ಪಿತ್ತು ಎಂದೆನಿಸುತ್ತೆ. ಇಂದು ಅವನ ಚಿತ್ತದಲಿ ಚುಕ್ಕಿಯ ಚಿತ್ತಾರವೂ ಮೂಡಲಿಲ್ಲ, ಅವನ ಮಾತಿನ ರಂಗು ನನ್ನ ಮುಖದಲೂ ಮೂಡಲಿಲ್ಲ.
#ಸುಗುಣಾ ಮಹೇಶ್
ಪ್ರತಿದಿನ ಹೆಂಡತಿ ತಯಾರಿಸಿದ ತಿಂಡಿ ತಿಂದು ಗಡಿಬಿಡಿಯಿಂದ ಅವನು ಕೆಲಸಕ್ಕೆ ಹೊರಟಾಗ ಹೊಸಲಿನಲ್ಲಿ ರಂಗೋಲಿ ಇರುತ್ತಿತ್ತಾದರೂ ಅವನು ಯಾವತ್ತೂ ಗಮನಿಸಿರಲಿಲ್ಲ. ಅವನಿಗೆ ವ್ಯವಧಾನವಿರುತ್ತಿರಲಿಲ್ಲ. ಇಂದು ಮುಂಜಾನೆ ಅವಳು ರಂಗೋಲಿಯಿಡುತ್ತಿದ್ದಾಗ ತಲೆ ಸುತ್ತು ಬಂದಂತಾಗಿ ಒಳ ಹೋದವಳೇ ಮಲಗಿಬಿಟ್ಟಳು. ಇವನಿಗೆ ತಿಂಡಿಯಿಲ್ಲದೆ ಹೊಟ್ಟೆ ಹಸಿದು ಸಿಟ್ಟು ತಲೆಗೇರಿ ಅವಳಿಗೆ ಬಯ್ದು ಕೆಲಸಕ್ಕೆ ಹೊರಟ. ಅವಳು ಸದ್ದು ಮಾಡದೆ ಒಳಗೊಳಗೇ ಅತ್ತಳು. ಇಂದು ಹೊಟ್ಟೆಗೆ ಏನೂ ಇಲ್ಲದೆ ಹೊರ ಬಂದವನ ಕಣ್ಣಿಗೆ ರಂಗೋಲಿ ಬಿದ್ದು ಸಿಟ್ಟಲ್ಲಿ ಅದನ್ನು ಒದ್ದುಕೊಂಡು ಹೋದ. ಪಕ್ಕದ ಮನೆಯ ಹೆಂಗಸರಿಗೆ ಇವಳು ಹೊಸಲಿನ ಮುಂದೆ ಹಾಕಿದ್ದ ರಂಗೋಲಿಯ ಚುಕ್ಕಿಯಲ್ಲಿ ತಪ್ಪು ಕಂಡಿತು. ಬೇರೇನೂ ಕಾಣಲಿಲ್ಲ.
#ಕಿರಣ ಕುಮಾರ
ಡಿಪ್ಲಮೋ ಮೆಕ್ಯಾನಿಕಲ್ ಓದುವಾಗಿನಿಂದಲೂ ಅವರಿಬ್ಬರೂ ಪ್ರೇಮಿಗಳು. ಮನೆಯವರ ವಿರೋಧದ ನಡುವೆಯೂ ವಿವಾಹವಾದರು. ಎಲ್ಲರಿಂದಲೂ ದೂರವಾಗಿ ಸ್ವತಂತ್ರವಾಗಿ ಕಾಣದೂರಿನಲ್ಲಿ ಬದುಕು ಕಟ್ಟಿದರು. ಸ್ವಂತ ಗ್ಯಾರೆಜೊಂದನ್ನು ಆರಂಭಿಸಿ ಯಾರಹಂಗಿಲ್ಲದೇ ಅದರಲ್ಲಿಯೇ ಗಂಡ ಹೆಂಡತಿ ನೆಮ್ಮದಿಯಾಗಿದ್ದರು. ಈಗವಳು ಆರು ತಿಂಗಳ ಗರ್ಭಿಣಿ. ಇಬ್ಬರ ಸಂತೋಷಕ್ಕೆ ಲೆಕ್ಕವಿಲ್ಲ, ಕಟ್ಟಿದ ಕನಸುಗಳಿಗೆ ಮಿತಿಯಿಲ್ಲ.. ಇನ್ನೇನು ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕೇನ್ನುವಷ್ಟರಲ್ಲಿ ವಿಧಿಯು ಅಟ್ಟಹಾಸ ಮೆರೆದಿತ್ತು. ಗಂಡ ಅಪಘಾತದಲ್ಲಿ ಸ್ಪಾಟ್ ಔಟು. ಹಲವಾರು ಕನಸುಗಳ ರಂಗೋಲಿ ಬಿಡಿಸುತ್ತಿದ್ದ ಆ ದಂಪತಿಗಳ ಬಾಳಿನ "ಹೊಸಲಿನ ಮುಂದೆ ರಂಗೋಲಿಯ ಚುಕ್ಕಿತಪ್ಪಿತ್ತು" ಆದರೂ ದೃತಿಗೆಡದೆ ಏಕಾಂಗಿ ಬಸುರಿ ಮಹಿಳೆ ಕೈಯಲ್ಲಿ ಸ್ಪಾನರ್ ಹಿಡಿದು ಹೊಸ ಚಿತ್ತಾರ ರಚಿಸಲು ಕಾರ್ಯತತ್ಪರಳಾದಳು.
#ಎಂ.ಆರ್.ಸಚಿನ್
ನಿನ್ನೆಯಷ್ಟೇ ಮದುವೆಯಾದ ಗರತಿಯವಳು. ಮದುವೆಯ ಮುಂಚೆ ರಂಗೋಲಿಯಿಟ್ಟ ಅಭ್ಯಾಸವಿಲ್ಲ. ಸಂಪ್ರದಾಯದಂತೆ ಶೋಭನದ ಮರುದಿನ ರಂಗೋಲಿಯ ಡಬ್ಬಿ ಅತ್ತೆಯ ಕೈ ತಪ್ಪಿ ಸೊಸೆಗೆ ಬಂದಿತ್ತು. ಎಲ್ಲೋ ನೋಡಿದ ಎಂಟು ಮತ್ತು ಒಂಭತ್ತರ ಚುಕ್ಕಿಯ ರಂಗೋಲಿ ; ಜನ ಏನು ಹೇಳುತ್ತಾರೋ ಎಂಬ ಭಯದಲ್ಲೇ ಕಲಸಿಹೋಗಿತ್ತು... ಅಂದು “ಹೊಸಿಲ ಮುಂದೆ ರಂಗೋಲಿಯ ‘ಚುಕ್ಕಿ’ ತಪ್ಪಿತ್ತು”.. ಆದರೆ ಚುಕ್ಕಿ ತಪ್ಪಿಲ್ಲವೇನೋ ಎಂಬಂತೆ ರಂಗೋಲಿ ಮೂಡಿತ್ತು... ಜನರ ಉದ್ಗಾರ ಉತ್ಸಾಹ ನೀಡಿತ್ತು..!
#ಸತೀಶ ಹೆಗಡೆ ಶಿರಸಿ
ಅವಳು ಸುಂದರಿ ಆದರೆ ಅನಾಥೆ. ಮೂಲದ ವಿವರಗಳು - ತಂದೆ ತಾಯಿಗಳ ಬಗ್ಗೆ - ಅವಳಿಗೇ ತಿಳಿದಿಲ್ಲ. ಆದರೂ ಅವಳದು ಮೂಲಾ ನಕ್ಷತ್ರವೆಂದು ಮಾತ್ರ ಗೊತ್ತು. ಮೂಲಾ ನಕ್ಷತ್ರವೆಂದು ವಧುಪರೀಕ್ಷೆಗಳಲ್ಲಿ ಅನುತ್ತೀರ್ಣ ಅವಳ ನೊಸಲಿನ ಬರಹ. ಇದನ್ನೇ ನೆನೆಯುತ್ತಾ ಹಳಿಯುತ್ತಾ ತನ್ನ ಪಿ.ಜಿ. ಹಾಸ್ಟೆಲ್‌ ಮುಂದೆ ಬೆಳಿಗ್ಗೆ ರಂಗೋಲಿಯಿಟ್ಟಳು. ಹೊಸಿಲ ಮುಂದೆ ರಂಗೋಲಿಯ ಚುಕ್ಕಿ ತಪ್ಪಿತ್ತು. ಚಿತ್ತಾರವೂ ಹಳಿ ತಪ್ಪಿತ್ತು ತನ್ನ ಮನಸ್ಸಿನಂತೆ.
#ಹರ್ಷ ದೇವನಹಳ್ಳಿ
ಅವಳು 20ರ ತರುಣಿ, ಎಂದಿನ0ತೆ ಮುಂಜಾನೆಯೇ ಎದ್ದು . ಕಸಗುಡಿಸಿ,ಅಂಗಳಕ್ಕೆ ನೀರು ಹಾಕಿದಳು. ಕೈಯಲ್ಲಿ ರಂಗೋಲಿ ಇತ್ತು,ಮನಸು ಎರಡು ವರ್ಷಗಳ ಹಿಂದೆ ಸಾಗಿತ್ತು. ಇಂದಿಗೆ ಸರಿಯಾಗಿ ಎರಡು ವರ್ಷಗಳ ಹಿಂದೆ ಹೀಗೆ,ಹೀಗೆಯೇ ರಂಗೋಲಿ ಬಿಡಿಸುವಾಗ ಸೈಕಲ್ ಗಂಟೆಯ ಶಬ್ದ ಕೇಳಿತ್ತು. ತಲೆಯೆತ್ತಿ ನೋಡಿದರೆ ಪೇಪರ್ ಹಾಕುವ ಸುಂದರ ತರುನನಿದ್ದ.ಸರಕ್ಕನೆ ಪೇಪರ್ ಎಸೆದು ಹೋಗಿಬಿಟ್ಟ. ಮೊದ ಮೊದಲು ಅವನ ರೂಪಕೆ ಮರುಳಾಗಿದ್ದವಳು ಕ್ರಮೇಣ ಅವನ ದುಡಿತದ ಹುಮ್ಮಸ್ಸು ಏನನ್ನೋ ಸಾದಿಸಬೇಕೆಂಬ ಹಂಬಲ ಎಲ್ಲವನ್ನೂ ಪ್ರೀತಿಸತೊಡಗಿದಳು.ಅವನಿಗೂ ಇವಲೆಂದರೆ ಪ್ರೀತಿ. ಅವರಿಬ್ಬರ ಮನದಲ್ಲಿ ಪ್ರೇಮದ ರಂಗೋಲಿ ಮೂಡಿ ಆಗಿತ್ತು. ಹೀಗೆ 2 ವರ್ಷ ಕಳೆದವು. ಆದರೆ ಇಂದು ಇವಳ ನೀಸ್ಚಿತಾರ್ಥ್ ಇವಳ ದೂರದ ಸಂಬಂದಿಯೊದನೆ.ಅದೇ ಚಿಂತೆಯಲ್ಲಿ ಅವಳು ಬಿಡಿಸುತ್ತಿದ್ದ ಹೊಸಲಿನ ಮುಂದಿನ ರಂಗೋಲಿಯ ಚುಕ್ಕೆ ತಪ್ಪಿತು.ಮಾಮೂಲಿಯಂತೆ ಸೈಕಲ್ ಗಂಟೆ ಕೇಳಿಸಿತು,ಪೇಪರ್ ಎಸೆದ ಅವನು ಮುಗುಳ್ನಕ್ಕ,ಇವಳು ನಗಲಿಲ್ಲ. ತಪ್ಪಿದ ಚುಕ್ಕಿಯ ಸರಿಪಡಿಸಿ ಅದೇ ರಂಗೋಲಿಯ ಪೂರ್ಣಗೊಳಿಸುವ ಬದಲು,ಹೊಸತೇ ರಂಗೋಲಿಯ ಬಿಡಿಸಿದಳು. ಅವನ ಕಡೆಗೂ ನೋಡದೆ ಒಳನಡೆದಳು. ಅಲ್ಲಿಗೆ ಅವರಿಬ್ಬರ ನಡುವಿನ ಪ್ರೇಮದ ರಂಗೋಲಿ ಮಾಸಿ ಹೋಯಿತು.
#ವೆಂಕಟೇಶ ಪಾಟೀಲ
ಹೊಸ ಪರ್ಫ್ಯೂಮನ್ನ ಸೋಕಿಕೊಂಡು ಅವನಷ್ಟಕ್ಕೆ ಹೋಗುತ್ತಿದ್ದ. ಮನೆ ಮುಂದೆ ಗೋಮಯವನ್ನು ಸಾರಿಸಿ ಚಂದದ ರಂಗೋಲಿ ಇಡಲು ಶೇಡಿ ಉಂಡೆ ಪುಡಿ ಮಾಡಿದವಳಿಗೆ ಅವನ ಪರ್ಫ್ಯೂಮಿನ ಘಾಟು ತಾಗಿತು... ಆಆಆಆಆ...ಆಕ್ಷೀ ಅಂದವಳ ರಂಗೋಲಿಯ ಚುಕ್ಕಿ ತಪ್ಪಿತ್ತು, ಅಂಗಳದ ತುಂಬ ಶೇಡಿ ಹರಡಿತ್ತು
#ಶರತ್ ಹೆಗಡೆ
ದಿನಾ ಬೆಳಗೆದ್ದು ತಲೆಸ್ನಾನ ಮಾಡಿ ಹಣೆಬೊಟ್ಟನಿಟ್ಟು ನೆಲಕೆ ನೀರಾಕಿ ರಂಗೋಲಿ ಬಿಡಿಸುವ ಚಟವಿತ್ತು ಆ ಪತಿವ್ರತೆಗೆ,ಅದೊಂದಿನ ಕುಡಿದ ಗಂಡ ರಾತ್ರಿ ಬೇರೊಬ್ಬಳ ಜೊತೆಗೆ ಬಂದದ್ದು ನೆನೆದು ಬಂದ ಕಣ್ಣೀರ ಹನಿಯ ಮಂಜಿಗೆ ರಂಗೋಲಿ ಚುಕ್ಕಿ ತಪ್ಪಿತ್ತು...

#ಜಗದೀಶ ಪಾಟೀಲ
ಗೌರಿ ಬೆಳಗೆದ್ದು ಬಾಗಿಲಿಗೆ ನೀರು ಹಾಕಿ. ರ೦ಗೋಲಿಯ ಚುಕ್ಕಿ ಇಡುವ ಸಮಯ .ಪಕ್ಕದ್ಮನೆ ಲಕ್ಷ್ಮಿ ಬ೦ದು ಅಯ್ಯೋ ನಮ್ಮ ಪುಟ್ಟಾ ಎ೦ಥಾ ತು೦ಟಾ ಅ೦ತೀರಿ ನೀರ ಚೆಲ್ಲಿ ರ೦ಗೋಲಿಯೆಲ್ಲಾ ಅಳಿಸಿ ಹಾಕಿದಾನೆ ರೀ ಪುನಃ ಹಾಕಬೇಕಾಯಿತು ಬ೦ಜೆಯಾಗಿದ್ದ ಗೌರಿ ಹಾಕುತ್ತಿದ್ದ ಚುಕ್ಕಿ ತಪ್ಪಿತು ಮಗುವಿನ ಚಿತ್ರ ಕಣ್ಣ ಮು೦ದೋಡಿತು.
#ಕಲಾವತಿ ಚಂದ್ರಶೇಖರ
ಬೇರೆ ಜಾತಿಯ ಹುಡುಗನೆಂದರೆ ಅಪ್ಪ ಒಪ್ಪುವುದಿಲ್ಲಾ.. ಸಾಯಿಸಿಯೇ ಬಿಟ್ಟನೂ..! ಅಪ್ಪನ ಭಯಕ್ಕೆ ಅವನ ದೊಡ್ದ ಮಗಳು ಹೊಸಿಲು ದಾಟಿದ್ದಳು. ಈಗ ಅಪ್ಪನಿಗೂ ಭಯ!!ಕಾಲೇಜಿಗೆ ಹೋಗುವ ಚಿಕ್ಕ ಮಗಳ ಮೇಲೆ. ಮಗಳ ಕಾಲೇಜಿನವರೆಗೂ ಹೋಗುತ್ತಾನೆ, ಮಗಳು ನಗುನಗುತ್ತಾ ಮಾತಾಡುತ್ತಿದ್ದ ಆಟೋದನಿಗೆ ಗೆಳೆಯರ ಜೊತೆ ಸೇರಿ ಧರ್ಮದೇಟು ನೀಡುತ್ತಾನೆ..! ಅವಳ ಸಹಪಾಠಿ ಹುಡುಗರಿಗೆ ಬೆದರಿಕೆ ಹಾಕುತ್ತಾನೆ.. ಸಂಜೆಯಾದರೆ ಕುಡಿದು ಬಂದು ಕಾಲೇಜಿಗೆ ಹೋಗಬೇಡವೆಂದು ಮನಸೋ ಇಚ್ಛೆ ಬಡಿದು ತಾಕೀತು ಮಾಡುತ್ತಾನೆ. ಅಪ್ಪನ ಕಾರಣದಿಂದ ಇವಳೊಂಟಿಯಾಗಿ ಉಳಿದು ಹೋಗುತ್ತಾಳೆ. ಇಂತಹ ಅಮಾವಾಸ್ಯೆಯ ಕಾರ್ಮೂಗಿಲ ಅವಧಿಯಲ್ಲೇ ಬದುಕಿಗೆ ಬೆಳಂದಿಗಳ ಪರಿಚಯವಾಗಿದ್ದು..! ಇದೀಗ ಚಂದಿರನ ಜೊತೆ ಹೊಸಲಾಚೆ ಹೆಜ್ಜೆ ಇಡುತ್ತಾಳೆ ಶಾಶ್ವತವಾಗಿ ಅಕ್ಕನಂತೆ. ಪಾಪ ಅವನು: ಅವನೊಳಗೆ ಅನುಮಾನದ ಬೀಜ ಮೊಳೆತಾಗಲೇ ಹೊಸಿಲ ಮುಂದಿನ ರಂಗೋಲಿಯ ಚುಕ್ಕಿ ತಪ್ಪಿದುದು ಅವನಿಗೆ ತಿಳಿಯಲೇ ಇಲ್ಲಾ!
# ಸುಷ್ಮಾ ಮೂಡಬಿದ್ರಿ

2 ಕಾಮೆಂಟ್‌ಗಳು:

  1. ಚಿನ್ಮಯ್,
    ನಿಮ್ಮ ಬಹಳ ಒಳ್ಳೆಯ ಕುಡಿಕಥೆಗಳು ಪ್ರಯತ್ನಕ್ಕೆ ಪೂರಕವಾಗಿ ಬ್ಲಾಗನ್ನೂ ತೆರೆದಿದ್ದೀರಿ.. ಶುಭವಾಗಲಿ... ನಮ್ಮ ಬೆಂಬಲವಿದೆ...

    ಅಭಿನಂದನೆಗಳು.. :)

    ಪ್ರತ್ಯುತ್ತರಅಳಿಸಿ
  2. Chinmay,
    Chennagide.nijakku rangoli bagge ishtondu kudigathegala...annisthu.but ellavu arthapoornavagive.

    ಪ್ರತ್ಯುತ್ತರಅಳಿಸಿ